ರಾಯಚೂರು: ಬಿಜೆಪಿ ಶಿಸ್ತಿನ ಪಕ್ಷ, ಬಿ.ಎಸ್.ಯಡಿಯೂರಪ್ಪ ಶಿಸ್ತಿನ ನಾಯಕ. ಊಹಾಪೋಹಗಳಿಗೆ ಕಿವಿಗೊಡದೆ ಅವರ ಮಾತನ್ನು ನಂಬಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಸಹಿ ಸಂಗ್ರಹ ಸಂಪ್ರದಾಯವೇ ಇಲ್ಲ. ಅದು ಬಿಜೆಪಿ ಪದ್ಧತಿ ಅಲ್ಲ. ಪರವಾಗಲಿ ವಿರೋಧವಾಗಲಿ ಸಹಿ ಸಂಗ್ರಹ ಮಾಡಕೂಡದು ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಅವರು ಮಾಡಿದ್ದಾರಂತೆ, 60 ಜನ ಸಹಿ ಹಾಕಿದ್ದಾರಂತೆ ಎಂಬ ಅಂತೆ ಕಂತೆ ಬಿಡಿ. ಸಹಿ ಮಾಡಿದ್ದು ಯಾರಾದರೂ ನೋಡಿದ್ದಾರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಗಿಡಮೂಲಿಕೆಗಳ ಆಗರ, ಶಿವಯೋಗಿಗಳ ತಪವನ, ತುಮಕೂರಿನ ಪ್ರವಾಸಿ ತಾಣ ಸಿದ್ದರ ಬೆಟ್ಟ
ಈ ವಿಚಾರದಲ್ಲಿ ಬಿಎಸ್ ವೈ, ನಳೀನ್ ಕುಮಾರ್ ಕಟೀಲ್, ಪ್ರಹ್ಲಾದ ಜೋಶಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಇನ್ನಾದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕುತಂತ್ರ ರಾಜಕಾರಣ ಮಾಡುವುದನ್ನು ಬಿಡಲಿ ಎಂದರು.
ಬಿಎಸ್ ವೈ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡುತ್ತಿದ್ದಂತೆ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಹೇಳಿಕೆಯೇ ಬದಲಾಗಿದೆ. ಆದರೆ, ಆಟ ಬಿಜೆಪಿ ಮುಂದೆ ನಡೆಯಲ್ಲ. ಮುಂದೆ ಅವರೇ ಅಧಿಕಾರಕ್ಕಾಗಿ ಕಚ್ಚಾಡ್ತಾರೆ ನೋಡುತ್ತಿರಿ. ಅವರಿಗೆ ಯಡಿಯೂರಪ್ಪನವರು ಯಾವ ಉತ್ತರ ನೀಡಬೇಕಿತ್ತೋ ಅದು ನೀಡಿಯಾಗಿದೆ ಎಂದರು.