ಬೆಂಗಳೂರು: ಕೇಂದ್ರದಲ್ಲಿ ಎಲ್. ಕೆ.ಅಡ್ವಾಣಿ ಸೇರಿದಂತೆ ಹಿರಿಯ ನಾಯಕರನ್ನು ಪಕ್ಷದ ಮಾರ್ಗದರ್ಶಕ ಮಂಡಳಿಗೆ ಸೇರಿಸಿದಂತೆಕರ್ನಾಟಕದಲ್ಲೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ಮೋದಿ ಮತ್ತು ಅಮಿತ್ ಶಾ ಜೋಡಿ ಮಾರ್ಗದರ್ಶಕ ಮಂಡಳಿಗೆ ಸೇರಿಸುತ್ತದೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ಭವಿಷ್ಯ ನುಡಿದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಹಾಗೂ ಶಾ ಜೋಡಿಯ ಮೇಲೆ ರಾಜ್ಯದ ಜನತೆಗೆ ನಂಬಿಕೆ ಇಲ್ಲ. ಈಗಾಗಲೇ ರಾಷ್ಟ್ರೀಯ ನಾಯಕರನ್ನು ನಿವೃತ್ತಿಗೊಳಿಸಿ ಮಾರ್ಗದರ್ಶಕ ಮಂಡಳಿಗೆ ಸೇರಿಸಿದ್ದಾರೆ. ಅದೇ ರೀತಿ ಯಡಿಯೂರಪ್ಪ ಅವರನ್ನು ನಿವೃತ್ತಿ ಗೊಳಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿಗೆ ಸೋಲಿನ ಭೀತಿಯಿಂದ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ಎ ಟೀಮ್ ಮತ್ತು ಬಿ ಟೀಮ್ ಆಗಿ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಮಾಯಾವತಿ ಜೊತೆಗೆ ಜೆಡಿಎಸ್ ಒಪ್ಪಂದ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಐದು ವರ್ಷದಲ್ಲಿ 50 ಲಕ್ಷ ಉದ್ಯೋಗ ಸೃಷ್ಠಿಸಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಉದ್ಯೋಗ ಸೃಷ್ಠಿಸುವಲ್ಲಿ ವಿಫಲವಾಗಿದೆ. ವಿದೇಶಗಳಲ್ಲಿಯೂ ಭಾರತೀಯರು ಉದ್ಯೋಗ ಕಳೆದುಕೊಳ್ಳುತ್ತಿದ್ದು, ಅವರ ರಕ್ಷಣೆಗೂ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಡೋಕ್ಲಾಂ ಪ್ರದೇಶದಲ್ಲಿ ಚೀನಾ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಗಡಿ ಭಾಗವನ್ನು ಅಕ್ರಮಿಸಿಕೊಳ್ಳಲು ಮುಂದಾಗುತ್ತಿದೆ. ಆದರೆ, ಚೀನಾ ಅತಿಕ್ರಮಣ ಪ್ರವೇಶಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದ ಪ್ರಧಾನಿ ಮರೆತು ಕುಳಿತಿದ್ದಾರೆ. ಈಗ ಚೀನಾ ಪ್ರವಾಸ ಸಂದರ್ಭದಲ್ಲಾದರೂ ಈಬಗ್ಗೆ ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.