Advertisement

ಬಿಎಸ್‌ವೈ ಸರ್ಕಾರ ಸ್ಥಿರ: ಶೋಭಾ ಕರಂದ್ಲಾಜೆ

08:52 AM Dec 08, 2019 | Team Udayavani |

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಸ್ಥಿರವಾಗಿದ್ದು, ಉಪ ಚುನಾವಣೆ ಫ‌ಲಿತಾಂಶ ಹೊರ ಬಿದ್ದ ಬಳಿಕ ಪೂರ್ಣ ಬಹುಮತದೊಂದಿಗೆ ಮುಂದಿನ ಮೂರೂವರೆ ವರ್ಷ ಆಡಳಿತ ನೀಡಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ಉಪ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಬೇಕಾದ ಎಲ್ಲ ಪ್ರಯತ್ನ ಮಾಡಲಾಗಿದೆ. ಇದರ ಹೊರತಾಗಿಯೂ ಕೆಲವರು ಸೋತರೆ ಯಾರನ್ನು ಹೊಣೆ ಮಾಡಬೇಕೆಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದರು.

ಸಂಸದ ಬಿ.ಎನ್‌.ಬಚ್ಚೇಗೌಡ ಕುಟುಂಬಕ್ಕೆ ಬಿಜೆಪಿ ಹೆಚ್ಚು ಅವಕಾಶ ನೀಡಿದರೂ ಅವರ ಪುತ್ರ ಪಕ್ಷ ವಿರೋಧಿ ಚಟುವಟಿಕೆ ಮೂಲಕ ಸ್ಪರ್ಧೆಗಿಳಿದಿದ್ದಾರೆ. ಇವರ ವರ್ತನೆಗೆ ಅಲ್ಲಿನ ಜನ ತಕ್ಕ ಪಾಠ ಕಲಿಸಲು ಮುಂದಾಗಿದ್ದರಿಂದ ಎಂ.ಟಿ.ಬಿ. ನಾಗರಾಜ ಅವರ ಗೆಲುವು ಖಚಿತ ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಲ್ಲಿ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸಹಕಾರಿ ಆಗುತ್ತದೆ. ಪರಸ್ಪರ ಸರ್ಕಾರಗಳಲ್ಲಿ ಸಮನ್ವಯವೂ ಇರುತ್ತದೆ ಎಂದರು.

ನೆರೆ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ವಿತರಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಮರ್ಥವಾಗಿ ಹೊಣೆಗಾರಿಕೆ ನಿಭಾಯಿಸಿದೆ. ಯಾವ ಸಮೀಕ್ಷೆ ನಡೆಸದೇ ಬಾಧಿತರಿಗೆ ತುರ್ತು ಪರಿಹಾರ ನೀಡಿದ್ದೇವೆ. ಆದರೆ ಕೆಲ ತಾಂತ್ರಿಕ ಕಾರಣದಿಂದ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆಯೇ ಹೊರತು ಬೇರೆ ಕಾರಣವಿಲ್ಲ. ರಾಜ್ಯಕ್ಕೆ ನೆರೆ ಪರಿಹಾರ ವಿತರಣೆ ಸೇರಿದಂತೆ ಯಾವುದೇ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಕ್ಷಪಾತ ಧೋರಣೆ ಅನುಸರಿಸಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next