ಕಲಬುರಗಿ: ಬೇರೆ ಸಭೆಗೆ ಹೋಗಿದ್ದರಿಂದ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಗೆ ಹೋಗಲಿಕ್ಕಾಗಿಲ್ಲ. ಆದರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಜಯಪುರದಲ್ಲಿ ಬಿಜೆಪಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೇ ನಿಗದಿಯಾಗಿದ್ದ ಬೇರೆ ಸಭೆ ಹೋಗಿದ್ದರಿಂದ ಅಲ್ಲಿಗೆ ಹೋಗಿದ್ದೆ. ಹೀಗಾಗಿ ಶುಕ್ರವಾರ ಬಿಜೆಪಿ ಸಭೆಗೆ ಹೋಗಲು ಆಗಲಿಲ್ಲ. ಹೋಗದೆ ಇರುವುದಕ್ಕೆ ವಿಶೇಷ ಕಾರಣವಿಲ್ಲ ಎಂದು ವಿವರಣೆ ನೀಡಿದರು.
ಬಿಜೆಪಿ ಪಕ್ಷ ಯಡಿಯೂರಪ್ಪಗೆ ಎಲ್ಲಾ ಸ್ಥಾನಮಾವವನ್ನು ಪಕ್ಷ ನೀಡಿದೆ. ಪ್ರಮುಖವಾಗಿ ನನ್ನನ್ನು ರಾಜ್ಯದಲ್ಲಿ ಮತ್ತು ಕೇಂದ್ರ ದಲ್ಲಿ ಗೌರವಯುತವಾಗಿ ಕಾಣುತ್ತಿದ್ದಾರೆ. ಯಾವುದೇ ಕೊರತೆ ಮಾಡಿಲ್ಲ. ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ರುಣಿಯಾಗಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ನಾಯಕತ್ವ ಕೊರತೆಯಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ. ಅವರು ಏನು ಮಾಡಿದ್ದಾರೆ ಏನು ಎಂಬುದನ್ನು ಹೇಳಲಿ ಎಂದು ತಿರುಗೇಟು ನೀಡಿದ ಬಿ.ಎಸ್. ಯಡಿಯೂರಪ್ಪ, ನಾವು ಮಾಡಿರುವ ಕಾರ್ಯಕ್ರಮಗಳನ್ನು ಜನ ಹಾಡಿ ಹೊಗಳುತ್ತಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡಿದರೆ ಅಧಿಕಾರ ಯಾಕೆ ಕಳೆದುಕೊಂಡರು? ಹುಚ್ಚುಚ್ಚಾಗಿ ಮಾತನಾಡುವುದು ಡಿಕೆಶಿ ಮತ್ತು ಸಿದ್ದರಾಮಯ್ಯರಿಗೆ ಶೋಭೆ ತರುವುದಿಲ್ಲ. ಟೀಕೆ ಮಾಡಬೇಕು ಅಂತ ಏನೇನೋ ಮಾತನಾಡುತ್ತಿದ್ದಾರೆ ತಿರುಗೇಟು ನೀಡಿದರು.
ಇದನ್ನೂ ಓದಿ:ಚಿಕ್ಕಮಗಳೂರು ಹಬ್ಬ: ಚಾರ್ಲಿ 777 ಶ್ವಾನದೊಂದಿಗೆ ಸಿ.ಟಿ.ರವಿ ರೌಂಡ್ಸ್
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಯಾವುದೇ ಶಕ್ತಿ ಕೂಡಾ ಬಿಜೆಪಿಯನ್ನು ಅಧಿಕಾರಕ್ಕೆ ತರುವುದನ್ನು ತಡೆಯಲು ಸಾಧ್ಯವಿಲ್ಲ. ಅನೇಕರು ನಾವೇ ಮುಖ್ಯಮಂತ್ರಿಯೆಂದು ತಿರುಕನ ಕನಸು ಕಾಣುತ್ತಿದ್ದಾರೆ. ಅದು ಯಾವುದು ಕಾರ್ಯರೂಪಕ್ಕೆ ಬರುವುದಿಲ್ಲಾ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ದೃಢ ವಿಶ್ವಾಸ ವ್ಯಕ್ತಪಡಿಸಿದರು.