ತಿ.ನರಸೀಪುರ: ಪರಿಶಿಷ್ಟ ಪಂಗಡಗಳ ನಾಯಕ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ, ಸಮಾಜದ ಮುಖ್ಯವಾಹಿನಿಗೆ ತರಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಣೆ ಮಾಡಿದರು ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಧಾನಸೌಧ ಆವರಣದಲ್ಲಿ ವಿ.ಎಸ್.ಉಗ್ರಪ್ಪನಿಗೆ ಗುತ್ತಿಗೆ ಕಾಮಗಾರಿಯನ್ನು ಕೊಟ್ಟು ವಾಲ್ಮೀಕಿ ಅವರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡಲು ಹೊರಟಿದೆ ಎಂದರು.
ಕಾಲ ಕಾಲಕ್ಕೆ ಕೃಷಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಕಂಡಂತಹ ಅತ್ಯಂತ ಬೇಜವಾಬ್ದಾರಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಜನರು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಅಧಿಕಾರ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಸಿ.ಅಶೋಕ್, ರೈತ ಮೋರ್ಚಾದಿಂದ ಮೈಸೂರು ರಸಾಯನಿಕಮುಕ್ತ ಕೃಷಿ ಜಿಲ್ಲೆಯನ್ನಾಗಿಸುವ ಅಭಿಯಾನ ಮಿಷನ್ 2024ರ ಪ್ರಯುಕ್ತ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳು ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಜಿಲ್ಲಾದ್ಯಂತ ಅನ್ನದಾತನ ಏಳಿಗೆಗಾಗಿ ಅ.8 ರಿಂದ 14ರ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಒಂದು ದಿನಕ್ಕೆ 18 ಕಿ.ಮೀ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲಾಗುವುದು. ಅಭಿಮಾನಕ್ಕೆ ಬಿಜೆಪಿ ವಿವಿಧ ಮೋರ್ಚಾಗಳು ಸಕ್ರೀಯವಾಗಿ ಕೈಜೋಡಿಸಬೇಕೆಂದು ಕರೆ ನೀಡಿದರು. ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯರಾದ ಪುಟ್ಟಬಸವಯ್ಯ, ಎಂ.ಸುಧಾ, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಪ್ರಸನ್ನ ಎಸ್.ಗೌಡ, ಪ್ರಧಾನ ಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ, ಮಂಡಲ ಕ್ಷೇತ್ರಾಧ್ಯಕ್ಷ ಎಚ್.ಎಂ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಶಕ್ತಿ ಕೇಂದ್ರದ ಅಧ್ಯಕ್ಷರಾದ ಬಿ.ವೀರಭದ್ರಪ್ಪ, ವಿಜಯಕುಮಾರ್, ಮುಖಂಡರಾದ ಎಂ.ಎಂ.ಜಯಣ್ಣ ಮತ್ತಿತರರಿದ್ದರು.