ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಾರದಂತೆ ಅವರ ಪಕ್ಷದಲ್ಲೇ ಷಡ್ಯಂತ್ರ ನಡೆದಿದೆ. ಈಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಧ್ಯೆ ನಡೆದಿರುವ ಜಗಳಕ್ಕೆ ಕೇಂದ್ರದ ನಾಯಕರೇ ಕಾರಣ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡಿನ ಕೆಲ ನಾಯಕರು ಯಡಿಯೂರಪ್ಪ ಅವರನ್ನು ಗುರಿ ಮಾಡಿಕೊಂಡು ಉದ್ದೇಶಪೂರ್ವಕವಾಗಿಯೇ ಈಶ್ವರಪ್ಪ ಅವರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಹೇಳಿದರು.
ಪರಸ್ಪರ ಕಚ್ಚಾಟದಿಂದ ಬಿಜೆಪಿಯಲ್ಲಿ ಈಗಾಗಲೇ ಮೂರು ಬಣಗಳಾಗಿವೆ. ಚುನಾವಣೆ ವೇಳೆಗೆ ಇನ್ನೂ ಮೂರು ಬಣಗಳಾಗಲಿವೆ ಎಂದು ಭವಿಷ್ಯ ನುಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕರೇ ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಕನಸನ್ನು ಬಿಜೆಪಿ ಕಾಣುತ್ತಿದೆ. ಇದು ನನಸಾಗುವುದು ಅಸಾಧ್ಯ. ಮೇಲಾಗಿ ಪಕ್ಷದ ಹೈಕಮಾಂಡಿಗೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಮನಸ್ಸಿಲ್ಲ. ಬದಲಾಗಿ ಅವರನ್ನು ಗೆಲ್ಲಲು ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ. ಇದೇ ಕಾರಣದಿಂದ ಪಕ್ಷದಲ್ಲಿ ಕಿತ್ತಾಟ ಆರಂಭವಾಗಿದೆ ಎಂದು ಹೇಳಿದರು.
ತಮ್ಮ ಅಧಿಕಾರದ ಅವಧಿಯಲ್ಲಿ ಮೊದಲು ಆದ ಒಪ್ಪಂದದಂತೆ 20 ತಿಂಗಳ ಅಧಿಕಾರ ನಡೆಸಲು ಯಡಿಯೂರಪ್ಪ ಅವರಿಗೆ ಅವಕಾಶ ಕೊಡಲು ಸಿದ್ಧರಿದ್ದೆವು. ಆದರೆ ಬಿಜೆಪಿಯ ಕೆಲ ನಾಯಕರೇ ಇದಕ್ಕೆ ತಡೆಯೊಡ್ಡಿದರು ಎಂದು ಕುಮಾರಸ್ವಾಮಿ ಹೇಳಿದರು.
ಸತೀಶ ಜಾರಕಿಹೊಳಿ ಜೆಡಿಎಸ್ ಸೇರುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಇದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.