ಬೆಂಗಳೂರು: “ಕೇಂದ್ರದ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಕೇಳಿದಷ್ಟು ಹಣ ಕಳುಹಿಸುತ್ತಿರಲಿಲ್ಲ. ಅದಕ್ಕಾಗಿಯೇ ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಗಿದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಮುಖ್ಯಮಂತ್ರಿ ನಿವಾಸ ಮುತ್ತಿಗೆ ಯತ್ನಕ್ಕೂ ಮುನ್ನ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಡಿಯೂರಪ್ಪ ಅವರ ಮೇಲೆ ನಿಜವಾಗಿ ಕಾಳಜಿ ಇಲ್ಲ. ಅವರ ಮೇಲೆ ಇದ್ದಕ್ಕಿದ್ದಂತೆ ಈಗ ಅನುಕಂಪ ಇರುವಂತೆ ನಾಟಕ ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಅವರು ಕಣ್ಣೀರಿಡುತ್ತಾ ಅಧಿಕಾರದಿಂದ ಇಳಿಯುವ ಹಾಗೆ ಮಾಡಿದವರು ಇದೇ ಪ್ರಧಾನಿ ನರೇಂದ್ರ ಮೋದಿ. ಈಗ ವೋಟಿಗಾಗಿ ಯಡಿಯೂರಪ್ಪ ಅವರ ಕೈಹಿಡಿದುಕೊಂಡು ಹೊಗಳುತ್ತಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ಅವರು ಕೇಂದ್ರ ನಾಯಕರು ಕೇಳಿದಷ್ಟು ದುಡ್ಡು ಕಳುಹಿಸುತ್ತಿರಲಿಲ್ಲ ಅಂತ ಕಾಣಿಸುತ್ತದೆ. ಅದಕ್ಕೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಆರೆಸ್ಸೆಸ್‌ನ ಕೈಗೊಂಬೆಯಂತೆ ಕೆಲಸ ಮಾಡುವ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಆಗ ಅಧಿಕಾರದಿಂದ ಕೆಳಗಿಳಿಸಿ, ಈಗ ವೋಟಿಗಾಗಿ ಅವರ ಕೈ ಹಿಡಿದುಕೊಂಡು ಹೊಗಳುತ್ತೀರಾ ಎಂದು ಪ್ರಶ್ನಿಸಿದರು.
“ಸಾಕಪ್ಪ ಸಾಕು 40 ಪರ್ಸೆಂಟ್ ಸರ್ಕಾರ’ ಎಂದು ಜನ ಹೇಳುತ್ತಿದ್ದಾರೆ. ಇನ್ನು ಸಾರ್ವಜನಿಕ ಸಭೆಗಳಲ್ಲಿ “40 ಪರ್ಸೆಂಟ್ ಕಮಿಷನ್ ಹಗರಣದ ಬಗ್ಗೆ ಮಾತನಾಡಿ ಸರ್’ ಎಂದು ಜನರೇ ಕೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು, ರುಪ್ಸಾ ಅಧ್ಯಕ್ಷರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದ ಉದಾಹರಣೆ ಹಿಂದೆ ಇದೆಯಾ? ಮಠಗಳಿಗೆ ನೀಡುವ ಅನುದಾನಕ್ಕೂ ಲಂಚ ಕೊಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ ಎಂದು ಪುನರುತ್ಛರಿಸಿದರು.
ಕೂಡಲೇ ಚುನಾವಣೆ ಘೋಷಿಸಬೇಕು. ಕೊನೆಪಕ್ಷ ಚುನಾವಣಾ ನೀತಿಸಂಹಿತೆ ಘೋಷಣೆಯಾದರೆ ಕೊನೆಪಕ್ಷ ಸುಲಿಗೆಯಾದರೂ ನಿಲ್ಲುತ್ತದೆ ಎಂದು ಆಗ್ರಹಿಸಿದ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಕಳೆದ 6 ತಿಂಗಳಿಂದ ಟೆಂಡರ್ ನೀಡಿರುವ ಕಾಮಗಾರಿಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಲಾಗುವುದು. ಹಾಗಾಗಿ, ಯಾವುದೇ ಗುತ್ತಿಗೆದಾರರು ಈಗ ಲಂಚ ನೀಡಿ ಗುತ್ತಿಗೆ ಕೆಲಸ ಹಿಡಿಯಬೇಡಿ. ಕಾರಣ ನಾವು ಬಂದ ಮೇಲೆ ಆ ಎಲ್ಲಾ ಕಾಮಗಾರಿಗಳನ್ನು ರದ್ದು ಮಾಡುತ್ತೇವೆ’ ಎಂದರು.