Advertisement
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಸ್.ಯಡಿ ಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಅಧಿಕಾರ ವಹಿಸಿಕೊಂಡಿದ್ದರೂ, ಒಂದಿ ಲ್ಲೊಂದು ಕಾರಣದಿಂದಾಗಿ ಅವಧಿ ಪೂರ್ಣಗೊಳಿಸದೇ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ್ದರು. ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ನಿರಂತರ ಆಂತರಿಕ ಸಂಘರ್ಷ ನಡೆಯುತ್ತಲೇ ಇದೆ.
Related Articles
Advertisement
ಹಿಡಿತಕ್ಕೆ ಸಿಗದ ದಕ್ಷಿಣದ ರಾಜಕಾರಣ: ಬಿಜೆಪಿ ಹೈಕಮಾಂಡ್ ನಾಯಕರಿಗೆ ಉತ್ತರ ಭಾರತದಲ್ಲಿ ಪಕ್ಷವನ್ನು ಹಿಂದೂತ್ವದ ಆಧಾರದಲ್ಲಿ ಅಧಿಕಾರಕ್ಕೆ ತರುವ ತಂತ್ರಗಾರಿಕೆ ಕರಗತವಾಗಿದ್ದು, ಅದೇ ತಂತ್ರವನ್ನು ದಕ್ಷಿಣ ಭಾರತದಲ್ಲಿಯೂ ಪ್ರಯೋಗ ಮಾಡುವ ಕಸರತ್ತನ್ನು ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕದಲ್ಲಿ ಎಷ್ಟೇ ಕೋಮು ಸಂಘರ್ಷಗಳು ನಡೆದರೂ, ಹಿಂದುತ್ವದ ಹೆಸರಿನಲ್ಲಿ ಮತ ಕ್ರೋಢೀಕರಣ ಕಷ್ಟವಾಗುವ ಲಕ್ಷಣಗಳು ಬಿಜೆಪಿ ನಾಯಕರಿಗೆ ಕಂಡು ಬಂದಂತಿದೆ. ಅಲ್ಲದೇ, ಕರ್ನಾಟಕ ಜಾತಿ ರಾಜಕಾರಣ ಹಾಗೂ ಸಮುದಾಯಗಳನ್ನು ಹಿಡಿತದಲ್ಲಿಟ್ಟುಕೊಂಡ ನಾಯಕರ ಪ್ರಭಾವದಿಂದ ಸಮುದಾಯಗಳನ್ನು ಸೆಳೆಯುವ ಪ್ರಯತ್ನ ಯಶಸ್ಸು ಕಾಣುವುದಿಲ್ಲ ಎನ್ನುವ ಅಂಶ ಬಿಜೆಪಿ ಹೈಕಮಾಂಡ್ ನಾಯಕರಿಗೆ ಮನವರಿಕೆ ಯಾದಂತಿದೆ ಎಂದು ಹೇಳಲಾಗಿದೆ.
ಆಪ್ತ ವಲಯದಲ್ಲಿ ಚಿಗುರಿದ ಕನಸುಯಡಿಯೂರಪ್ಪ ಅವರನ್ನು ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕ ಮಾಡಿದ್ದು, ಬಿಜೆಪಿ ಯಲ್ಲಿನ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಕನಸು ಕೈ ಬಿಟ್ಟಿದ್ದ ಬಹುತೇಕರು ಮತ್ತೆ ಕನಸು ಚಿಗುರುವಂತೆ ಮಾಡಿದೆ. ಆದರೆ, ಇನ್ನೊಂದೆಡೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ವಿರೋಧಿ ಬಣದ ಶಾಸಕರು ಹಾಗೂ ನಾಯಕರಲ್ಲಿ ಆತಂಕ ಹೆಚ್ಚಾಗುವಂತೆಯೂ ಮಾಡಿದೆ. ಎರಡು ಪ್ರಮುಖ ಸಮಿತಿಗಳಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ದೊರೆತಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕವೂ ಕೆಲವು ಶಾಸಕರಲ್ಲಿ ಉಂಟಾಗುವಂತೆ ಮಾಡಿತ್ತು. ಹೈಕಮಾಂಡ್ ಲೆಕ್ಕಾಚಾರದ ಚರ್ಚೆ
ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಪೂರ್ಣ ತೆರೆಗೆ ಕಳುಹಿಸುವ ಲೆಕ್ಕಾಚಾರದಲ್ಲಿಯೇ ಆಲೋಚನೆ ಮಾಡುತ್ತ ಏಕಾಏಕಿ ಪಕ್ಷದ ಅತ್ಯುನ್ನತ ಸಮಿತಿಯಲ್ಲಿ ಸ್ಥಾನ ನೀಡಿರುವುದರ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪ ಅವರ ಶಕ್ತಿ ಬಲಪಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದಾ ಅಥವಾ ಅವರಿಗೆ ಕೇಂದ್ರ ಸಮಿತಿಯಲ್ಲಿ ಸ್ಥಾನ ನೀಡಿ, ರಾಜ್ಯ ರಾಜಕೀಯದಿಂದ ಅವರನ್ನು ದೂರ ಮಾಡುವುದು, ಜೊತೆಗೆ ಅವರಿಗೆ ಉನ್ನತ ಸ್ಥಾನ ನೀಡಿರುವುದರಿಂದ ಪುತ್ರನಿಗೆ ಯಾವುದೇ ಸ್ಥಾನಮಾನ ಕೇಳದಂತೆ ಪರೋಕ್ಷ ನಿರ್ಬಂಧ ಹೇರುವ ಕಾರ್ಯತಂತ್ರ ಅಡಗಿದಿಯಾ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರಿಗೆ ಕರ್ನಾಟಕದ ಜೊತೆಗೆ ದಕ್ಷಿಣದ ರಾಜ್ಯಗಳಲ್ಲಿಯೂ ಪ್ರವಾಸ ಮಾಡುವ ಜವಾಬ್ದಾರಿ ನೀಡಿರುವುದರಿಂದ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆನ್ನುವ ಬಿಜೆಪಿ ಹೈಕಮಾಂಡ್‌ನ ಲೆಕ್ಕಾಚಾರಕ್ಕೆ ರಾಜ್ಯದ ಮತದಾರ ಯಾವ ರೀತಿ ಸ್ಪಂದಿಸುತ್ತಾನೆ ಎನ್ನುವುದು ಮಾತ್ರ ಇನ್ನೂ ನಿಗೂಢ. ●ಶಂಕರ ಪಾಗೋಜಿ