ದಾವಣಗೆರೆ: ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸೋಮವಾರ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಎಸಿಬಿಯನ್ನು ದುರುಪಯೋಗಪಡಿಸಿಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ವಿರುದ್ಧ ಇಲ್ಲ ಸಲ್ಲದ ದೂರು ದಾಖಲೆಗೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನ ವಜಾಕ್ಕೆ ಒತ್ತಾಯಿಸಿವ ರಾಜ್ಯಪಾಲರಿಗೆ ಕಳುಹಿಸಲು ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಇಲ್ಲ ಸಲ್ಲದ ದೂರು ದಾಖಲಿಸುತ್ತಿರುವುದು ಅತ್ಯಂತ ಕೀಳುಮಟ್ಟದ ರಾಜಕಾರಣ. ರಾಜ್ಯದಲ್ಲೆಡೆ ಬಿಜೆಪಿ, ಬಿ.ಎಸ್.ಯಡಿಯೂರಪ್ಪನವರ ಪರ ವ್ಯಕ್ತವಾಗುತ್ತಿರುವ ಉತ್ತಮ ಪ್ರತಿಕ್ರಿಯೆ ನೋಡಿ ಗಾಬರಿಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಸ್ ದಾಖಲಿಸುವಂತೆ ಮಾಡಿದ್ದಾರೆ. ಅವರು ಏನೇ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದು, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಡೆಯಲಿಕ್ಕೆ ಸಾಧ್ಯವೇ ಇಲ್ಲ ಎಂದರು.
ಯಡಿಯೂರಪ್ಪ ವಿರುದ್ಧ 6 ವರ್ಷದ ಹಿಂದೆ ಇದ್ದಂತಹ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ರಾಜಕೀಯ ದುರುದ್ದೇಶದಿಂದ ಕೇಸ್ ದಾಖಲಾಗುವಂತೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ದ್ವೇಷದ ರಾಜಕೀಯ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಸಿದ್ದರಾಮಯ್ಯ ಇನ್ನು ಉಳಿದಿರುವ ಅವಧಿಯಲ್ಲಾದರೂ ರಾಜ್ಯದ ಅಭಿವೃದ್ಧಿಯತ್ತ ಗಮನ ನೀಡಬೇಕು ಎಂದು ತಾಕೀತು ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂ ಪರಿವಾರದ ಮುಖಂಡರ ನಿರಂತರ ಹತ್ಯೆ, ಹಲ್ಲೆ ಪ್ರಕರಣ ಹೆಚ್ಚುತ್ತಿವೆ. ಬರೀ ದ್ವೇಷ, ಹಿಂದೂ ವಿರೋಧಿ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯರ ಸರ್ಕಾರ ವಜಾ ಮಾಡಬೇಕೆಂದು ಅವರು ಆಗ್ರಹಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರಾಜ್ಯ ಸರ್ಕಾರ ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ದೂರು ದಾಖಲಿಸುವುದನ್ನ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯನವರನ್ನ ಜೈಲಿಗೆ ಕಳಿಸುವ ಕೆಲಸ ಮಾಡಬೇಕಾಗುತ್ತದೆ. ಅಂತಹ ಕೆಲಸ
ಆಗಬಾರದು ಎನ್ನುವುದಾದರೆ ದ್ವೇಷದ ರಾಜಕಾರಣ ಬಿಟ್ಟು, ರಾಜ್ಯಕ್ಕೆ ಒಳ್ಳೆಯದಾಗುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಎಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಭ್ರಷ್ಟಾಚಾರದ ಪರವೋ, ವಿರುದ್ಧವೋ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು, ಯಡಿಯೂರಪ್ಪ ಮುಖ್ಯಮಂತ್ರಿ ಆಗು¤ತಾರೆ. ಹಾಗಾಗಿ ಅವರ ಪ್ರವಾಸಕ್ಕೆ ಬ್ರೇಕ್ ಹಾಕಬೇಕು ಎಂದು ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯ ಸರ್ಕಾರ ಇದೇ ರೀತಿಯ ಉದ್ದಟತನ ತೋರಿದರೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕರಾದ ಡಾ| ಎ.ಎಚ್. ಶಿವಯೋಗಿಸ್ವಾಮಿ, ಎಸ್.ವಿ. ರಾಮಚಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸಹನಾ ರವಿ, ಮುಖಂಡರಾದ ಅಣಬೇರು ಜೀವನಮೂರ್ತಿ, ಪ್ರೊ. ಲಿಂಗಪ್ಪ, ಆನಂದಪ್ಪ, ಎಚ್. ಎನ್. ಶಿವಕುಮಾರ್, ಪಿ.ಸಿ. ಶ್ರೀನಿವಾಸ್, ಎಚ್.ಸಿ. ಜಯಮ್ಮ, ರಾಜನಹಳ್ಳಿ ಶಿವಕುಮಾರ್, ಕಲ್ಲಪ್ಪ, ಪ್ರಭು ಕಲುºರ್ಗಿ, ನಾಗರತ್ನನಾಯ್ಕ, ಸರೋಜಾ ದೀಕ್ಷಿತ್, ಭಾಗ್ಯ ಪಿಸಾಳೆ, ಶಿವನಗೌಡ ಪಾಟೀಲ್, ಟಿಪ್ಪುಸುಲ್ತಾನ್, ಮಳ್ಳೆಕಟ್ಟೆ ನಾಗರಾಜ್, ಲಕ್ಷ್ಮಣ್, ಮನು, ಟಿಂಕರ್ ಮಂಜಣ್ಣ ಇತರರು ಇದ್ದರು.