Advertisement

ಯಡಿಯೂರಪ್ಪ ಲೆಕ್ಕ: ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿದ್ದೇನು?

09:53 AM Mar 06, 2020 | keerthan |

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 2020-21ನೇ ಸಾಲಿನ ಅಯವ್ಯಯ ಪತ್ರವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಕಳೆದ ಬಾರಿಗಿಂತ ಮೂರು ಸಾವಿರ ಕೋಟಿಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಅನ್ನು ಬಿಎಸ್ ವೈ ಮಂಡಿಸಿದರು. ಇಂದಿನ ಬಜೆಟ್ ಬಗ್ಗೆ ಹಲವು ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಿದ್ದು, ಅವುಗಳಲ್ಲಿ ಕೆಲವು ಇಲ್ಲಿದೆ.

Advertisement

ಹಸಿರು ಶಾಲು ಹಾಕಿದರೆ ರೈತರು ಉದ್ದಾರ ಆಗುತ್ತಾರಾ?: ಸಿದ್ದರಾಮಯ್ಯ ಪ್ರಶ್ನೆ
ಬಿಎಸ್ ವೈ ಅವರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಸಿರು ಶಾಲು ಹಾಕಿದರೆ ರೈತರು ಉದ್ದಾರ ಆಗುತ್ತಾರಾ?  ಯಡಿಯೂರಪ್ಪ ವ್ಯವಸಾಯ ಮಾಡಿದ್ದಾರೊ ಗೊತ್ತಿಲ್ಲ. ಯಾಕೆಂದರೆ ಅವರು ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ನಾನೂ ಮೂರು ವರ್ಷ ಹಸಿರು ಶಾಲು ಹಾಕಿಕೊಂಡಿದ್ದೆ. ಅವರು ಯಾವುದಾದರೂ ಶಾಲ್ ಹಾಕಿಕೊಳ್ಳಲಿ.  ಬಜೆಟ್ ನಲ್ಲಿ ಸುಳ್ಳು ಹೇಳುವುದೇಕೆ. ನೀರಾವರಿ ಕೃಷಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ ಎಂದರು.

ಮಹದಾಯಿ ಇವರು ಕ್ರೆಡಿಟ್ ತೊಗೊಳ್ತಿದಾರೆ. ನಮ್ಮ ಅವಧಿಯಲ್ಲಿ ಹೋರಾಟ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನಿದೆ. ಗೋವಾ ಸಿಎಂ ಜೊತೆ ಮಾತನಾಡಲು ಇವರಿಗೆ ಆಗಲಿಲ್ಲ. ಮಹದಾಯಿ ಯೋಜನೆಯನ್ನು ಕನಿಷ್ಟ 2 ವರ್ಷದಲ್ಲಿ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು. ಹೊಸ ಕಾರ್ಯಕ್ರಮ ಯಾವುದೂ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಅನುದಾನದಲ್ಲಿ ಆಸ್ಪತ್ರೆಗಳಿಗೆ ಸುಣ್ಣ ಬಣ್ಣ ಬಳಿಯಲೂ ಸಾಧ್ಯವಿಲ್ಲ: ಕುಮಾರಸ್ವಾಮಿ

ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಅನುದಾನ ಸಾಕಾಗುವುದಿಲ್ಲ. ಇದರಲ್ಲಿ ಆಸ್ಪತ್ರೆಗಳಿಗೆ ಬಣ್ಣ ಬಳಿಯುವುದಕ್ಕೂ ಸಾಧ್ಯವಿಲ್ಲ ಎಂದರು.

Advertisement

ನಮ್ಮ ಸರಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನೇ ಇಲ್ಲಿ ಮುಂದುವರಿಸಲಾಗಿದೆ. ಹೊಸ ಘೋಷಣೆಗಳಲ್ಲೂ ಸ್ಪಷ್ಟತೆಯಿಲ್ಲ. ಬಿಜೆಪಿಯವರಿಂದ ಹೊಸ ಯೋಜನೆಗಳನ್ನು ತರಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್ : ಗೋವಿಂದ ಕಾರಜೋಳ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ   ರಾಜ್ಯದ ಸರ್ವ ಜನಾಂಗದ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ 2020-21 ನೇ ಸಾಲಿನ ಆಯವ್ಯಯವನ್ನು ಇಂದು ಮಂಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.

ರಾಜ್ಯವು ನೆರೆ- ಬರ, ರೈತರ  ಸಾಲ ಮನ್ನಾ ಯೋಜನೆಯ ವ್ಯವಸ್ಥಿತ ಅನುಷ್ಠಾನ ಸೇರಿದಂತೆ, ರಾಜ್ಯ ಸರ್ಕಾರವು  ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹಾ  ಮುಖ್ಯಮಂತ್ರಿಗಳು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ  ಅತ್ಯುತ್ತಮವಾದ   ಆಯವ್ಯಯವನ್ನು ಮಂಡಿಸಿದ್ದಾರೆ.  ಕೃಷ್ಣ ಮೇಲ್ದಂಡೆ ಯೋಜನೆಗೆ ನೀರಾವರಿ ಇಲಾಖೆಯು ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವ ಸಂದರ್ಭದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಆರ್ & ಆರ್ ) ಕಾಮಗಾರಿಗಳಿಗೆ 10 ಸಾವಿರ ಕೋಟಿ ರೂ. ಅನುದಾನವನ್ನು 2020-21 ನೇ ಸಾಲಿನಲ್ಲಿ ಒದಗಿಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಗೋವಿಂದ ಎಂ ಕಾರಜೋಳ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next