ಬೆಂಗಳೂರು: ಸರಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚಿಸಿದ್ದು, ಇದು ತೀವ್ರ ಕುತೂಹಲ ಮೂಡಿಸಿದೆ.
ವಿಧಾನಮಂಡಲ ಅಧಿವೇಶನ ನಡುವೆಯೇ ಕುಮಾರಸ್ವಾಮಿ ಅವರು ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಭೇಟಿ ನಡೆಸಿದ್ದಾರೆ. ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡುವುದು ಅನುಮಾನ. ಇದೇ ಹಿನ್ನೆಲೆಯಲ್ಲಿ ಚರ್ಚೆಯಾಗಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್ ಜಾರಿ
ವಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ್ದು, ಇದರ ವಿರುದ್ಧ ಗೆಲ್ಲಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಬಿಜೆಪಿ ದಿಲ್ಲಿ ವರಿಷ್ಠರೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.
ವಿಧಾನಸಭೆಯ ಸದ್ಯದ ಬಲಾಬಲ 220 ಆಗಿದ್ದು, ಬಿಜೆಪಿ 116 ಸದಸ್ಯರ ಬಲ ಹೊಂದಿದೆ.