Advertisement

ಬಿಎಸ್‌ವೈ ಮತ್ತೆ ಸಿಎಂ ಬಿಜೆಪಿ ಗುರಿ: ಕೋಟ

06:00 AM Jul 08, 2018 | Team Udayavani |

ಮಂಗಳೂರು: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ಬಿಜೆಪಿಯ ಗುರಿ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಅಭಿನಂದನೆ ಸ್ವೀಕರಿಸಿದ  ಅವರು, ವಿಪಕ್ಷ ಸ್ಥಾನವನ್ನು ನಿರ್ವಹಣೆ ಮಾಡುವುದು ಬಿಜೆಪಿಯ ಗುರಿಯಲ್ಲ. ರಾಜ್ಯದಲ್ಲಿ ಬಿಜೆಪಿಯ ಆಡಳಿತವನ್ನು ತರುವುದೇ ನಮ್ಮ ಮೊದಲ ಆದ್ಯತೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಕಿ-ಅಂಶಗಳೇ ಮುಖ್ಯ. ಹೀಗಾಗಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಮುಖ್ಯಮಂತ್ರಿ ರಾಜ್ಯದ ಜನರ ತಾಯಿಯಿದ್ದಂತೆ ಎಂದು ಹೇಳಿದ್ದವರು ಬಜೆಟ್‌ ಮಂಡನೆ ಬಳಿಕ ಕರಾವಳಿ ಜಿಲ್ಲೆಗಳ ಪಾಲಿಗೆ ಮಲತಾಯಿಯಾಗಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ಟೀಕಿಸಿದರು.

ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ರಚನೆ, ಹೂಳೆತ್ತುವ ಸಮಸ್ಯೆ ಬಗ್ಗೆ ಕಲ್ಪನೆಯೇ ಇಲ್ಲ. ಕರಾವಳಿಗೆ ಈ ಹಿಂದಿನ ಸರಕಾರ ಘೋಷಿಸಿದ ಯೋಜನೆಗಳನ್ನು ಪೂರ್ಣಗೊಳಿಸುವವರೆಗೂ ಹೋರಾಟ ನಡೆಸುತ್ತೇವೆ ಎಂದರು. ಶಾಸಕ ಡಿ. ವೇದವ್ಯಾಸ ಕಾಮತ್‌, ಬಿಜೆಪಿ ಮುಖಂಡರಾದ ರವಿಶಂಕರ್‌ ಮಿಜಾರ್‌, ಉದಯಕುಮಾರ್‌ ಶೆಟ್ಟಿ, ಪ್ರತಾಪ್‌ ಸಿಂಹ ನಾಯಕ್‌, ಕಿಶೋರ್‌ ರೈ ಉಪಸ್ಥಿತರಿದ್ದರು.

ಸಾಲ ಮನ್ನಾ: ರೈತರಿಗೆ ವಂಚನೆ 
ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿಯವರು ರೈತರಿಗೆ ವಂಚನೆ ಮಾಡಿದ್ದಾರೆ. 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಅವರು ಬಿಡುಗಡೆಗೊಳಿಸಿದ್ದು ಕೇವಲ 6,500 ಕೋಟಿ ರೂ. ಇದರಿಂದಾಗಿ ಗೊಂದಲ ಸೃಷ್ಟಿಯಾಗಿದ್ದು, ಸಿಎಂ ಸಾಲಮನ್ನಾ ವಿಚಾರವನ್ನು ಸಮರ್ಪಕಗೊಳಿಸಬೇಕು.  ಬಜೆಟ್‌ನಲ್ಲಿ ಏರಿಕೆ ಮಾಡಿರುವ ವಿದ್ಯುತ್‌ ದರ, ಪೆಟ್ರೋಲ್‌, ಡೀಸೆಲ್‌ ದರವನ್ನು ತತ್‌ಕ್ಷಣ ವಾಪಸ್‌ ಪಡೆಯಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. 

ಹುಟ್ಟೂರಲ್ಲಿ  ಭವ್ಯ ಸ್ವಾಗತ
ಕೋಟ: ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಿದ ಕುರಿತು ವಿಧಾನ ಸೌಧದ ಗಾಂಧೀ ಪ್ರತಿಮೆ ಎದುರು  ಕರಾವಳಿ ಜಿಲ್ಲೆಗಳ ಬಿಜೆಪಿ ಶಾಸಕರು ಒಗ್ಗೂಡಿ ಹೋರಾಟ ನಡೆಸಿದ್ದು  ಐತಿಹಾಸಿಕ ಬೆಳವಣಿಗೆ. ಮುಂದೆ ಎಲ್ಲ ಶಾಸಕರು ಒಟ್ಟಾಗಿ ಕರಾವಳಿ ಸಮಸ್ಯೆಗಳ ಕುರಿತು ಸದನದಲ್ಲಿ ಹೋರಾಡುವುದಾಗಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿ, ಅಭಿಮಾನಿಗಳ ಅಭಿನಂದನೆ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

Advertisement

ಉಸ್ತುವಾರಿ ಸಚಿವರ ನೇಮಕವಾಗಿಲ್ಲ: ಉಡುಪಿ ಜಿಲ್ಲೆಯಲ್ಲಿ ನೆರೆ ಹಾವಳಿ, ಕಡಲ್ಕೊರೆತ, ಮೀನುಗಾರರ ಸಮಸ್ಯೆಗಳಿವೆ. ಆದರೆ ಸರಕಾರ ಇದುವರೆಗೆ ನಮ್ಮ  ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸದಿರುವುದು ದುರಂತ ಎಂದರು.

ಹುಟ್ಟೂರ ಸ್ವಾಗತ: ಮಾಬುಕಳದಲ್ಲಿ ಪುಷ್ಪಗುತ್ಛ, ಹೂವಿನ ಹಾರ ಹಾಕಿ ಬರಮಾಡಿಕೊಂಡ ಬಳಿಕ ಸಾಲಿಗ್ರಾಮ ತಲುಪಿದಾಗ ಅಭಿಮಾನಿಗಳು ಶುಭ ಕೋರಿದ‌ರು. ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಕೋಟದಲ್ಲಿ ಮುಸ್ಲಿಂ ಬಾಂಧವರು ಸ್ವಾಗತಿಸಿದರು. ಅಮೃತೇಶ್ವರೀ ದೇವಸ್ಥಾನದ ಬಳಿ ಹುಟ್ಟೂರ ಜನತೆ ವಾದ್ಯಘೋಷದೊಂದಿಗೆ ಬರಮಾಡಿಕೊಂಡರು. ಅನಂತರ ದೇವರಿಗೆ ಪೂಜೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next