Advertisement

ಉಪ ಚುನಾವಣೆ ಬಳಿಕವೂ ಬಿಎಸ್‌ವೈ

10:14 AM Nov 17, 2019 | Team Udayavani |

ಬೆಂಗಳೂರು: ಉಪ ಚುನಾವಣೆ ಬಳಿಕವೂ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಡಿಸೆಂಬರ್‌ ಅನಂತರ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಬಿಟ್ಟು ಬೇರೆ ನಾಯಕತ್ವದ ವಿಷಯ ಪಕ್ಷದ ಮಟ್ಟದಲ್ಲಿ ಪ್ರಸ್ತಾಪ ಇಲ್ಲವೇ ಇಲ್ಲ. ಅದೆಲ್ಲ ವದಂತಿಯಷ್ಟೇ ಎಂದರು.

Advertisement

“ಉದಯವಾಣಿ’ ಕಚೇರಿಯಲ್ಲಿ ನಡೆದ “ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಹುದ್ದೆ ನಿಭಾಯಿಸಲು ಯಡಿಯೂರಪ್ಪ ಅವರಿಗೆ ವಯಸ್ಸಿನ ವಿಷಯ ಅಡ್ಡಿಯಾಗುವುದಿಲ್ಲ. ಯಾಕೆಂದರೆ ವಯಸ್ಸು ಇರುವವರು ಮನೆಯಲ್ಲಿರುವಾಗ ಯಡಿಯೂರಪ್ಪ ರಾಜ್ಯ ತಿರುಗಿ ಪಕ್ಷ ಕಟ್ಟಿದ್ದಾರೆ. ಇತ್ತೀಚೆಗಿನ ಪ್ರವಾಹ ಪರಿಸ್ಥಿತಿ ನಿಭಾಯಿಸಿದ್ದು ಅವರ ಉತ್ಸಾಹ ಹಾಗೂ ಆಡಳಿತ ಕ್ಷಮತೆಗೆ ಸಾಕ್ಷಿ ಎಂದರು.

ಯಡಿಯೂರಪ್ಪ ಅವರು ಪಕ್ಷ ಕಟ್ಟಿದ್ದಾರೆ, ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದ್ದಾರೆ. ಎಲ್ಲರೂ ಅವರ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.

ಉಪ ಚುನಾವಣೆ ಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಮುಂದಿನ ಮೂರೂಕಾಲು ವರ್ಷ ಬಿಜೆಪಿ ಸರಕಾರ ಸುಭದ್ರವಾಗಿ ಮುಂದುವರಿಯಲಿದೆ. ನಮ್ಮನ್ನು ಬೆಂಬಲಿಸುವು ದಾಗಿ ಎಲ್ಲ ಕಡೆಯಿಂದ ಮಾತು ಗಳೂ ಕೇಳಿ ಬರು ತ್ತಿವೆ ಯಲ್ಲವೇ? ನಾವು ರಾಜ್ಯದ ಅಭಿವೃದ್ಧಿ ವಿಚಾರ ದಲ್ಲಿ ಏನು ಅಂದು ಕೊಂಡಿದ್ದೇವೋ ಅದನ್ನು ಸಾಧಿಸುತ್ತೇವೆ. ನಿಶ್ಚಿತ ಗುರಿಯೊಂದಿಗೆ ಮುನ್ನಡೆದಿದ್ದೇವೆ ಎಂದರು.

ಶಿವಾಜಿನಗರ, ರಾಣಿಬೆನ್ನೂರು ಟಿಕೆಟ್‌ ವಿಚಾರ
ದಲ್ಲಿ ಗೊಂದಲ ಇಲ್ಲ. ಕೆಲವು ಕಾರಣಗಳಿಂದ ರೋಶನ್‌ ಬೇಗ್‌ಗೆ ಟಿಕೆಟ್‌ ನೀಡಲು ಸಾಧ್ಯವಾಗಲಿಲ್ಲ. ಶಂಕರ್‌ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು. ಹೀಗಾಗಿ ಅವರನ್ನು ಪರಿಷತ್‌ ಸದಸ್ಯರಾಗಿ ಮಾಡಿ ಸಚಿವರಾಗಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ ಎಂದರು. ಟಿಕೆಟ್‌ ಹಂಚಿಕೆಯಲ್ಲಿ ಸಮಸ್ಯೆ ಇಲ್ಲ. ಲಕ್ಷ್ಮಣ ಸವದಿ ವಿಚಾರದಲ್ಲೂ ಪಕ್ಷ ಸ್ಪಷ್ಟವಾಗಿದೆ. ಅವರನ್ನು ಮುಂದೆ ಖಂಡಿತವಾಗಿ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

Advertisement

ಪ್ರಕೃತಿ ನಿಯಮ
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾದದ್ದು ಒಂದು ರೀತಿಯಲ್ಲಿ ಪ್ರಕೃತಿ ನಿಯಮವೇನೋ ಎನಿಸುತ್ತದೆ. ಏಕೆಂದರೆ ರಾಜಕೀಯ ಘಟಾನುಘಟಿಗಳೇ ತಾವಿದ್ದ ಪಕ್ಷಗಳಲ್ಲಿ ಭವಿಷ್ಯ ಇಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಬರಲು ಒಪ್ಪಿ ಸ್ಥಾನ ತ್ಯಾಗ ಮಾಡಿದರು. ಹೀಗಾಗಿ ಸರಕಾರ ರಚನೆಯಾಯಿತು. ನಮ್ಮನ್ನು ನಂಬಿ ತ್ಯಾಗ ಮಾಡಿದವರಿಗೆ ಬಿಜೆಪಿ ಗೌರವ ನೀಡಲಿದೆ ಎಂದು ತಿಳಿಸಿದರು. ಅನರ್ಹ ಶಾಸಕರ ಪೈಕಿ ಕೆಲವರ ವಿರುದ್ಧ ಬಿಜೆಪಿ ಹೋರಾಟ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನದು ಈಗ ಮುಗಿದ ಅಧ್ಯಾಯ. ಎಲ್ಲರೂ ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ. ನಮ್ಮ ಜತೆಗಿದ್ದಾರೆ ಎಂದರು.

ಡಿಸಿಎಂ ಹುದ್ದೆ ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫ‌ಲ. ಚುನಾವಣೆಗೆ ಎರಡೂವರೆ ವರ್ಷಗಳ ಮುಂಚೆಯೇ ಸದ್ದಿಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷ ಕಾಲ ಕಾಲಕ್ಕೆ ವಹಿಸಿದ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿದ್ದೇನೆ. ಉಪ ಮುಖ್ಯಮಂತ್ರಿ ಹುದ್ದೆಯೂ ನನಗೆ ಪಕ್ಷ ವಹಿಸಿದ ಹೊಣೆಗಾರಿಕೆ.
– ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next