Advertisement

ಬಿಎಸ್‌ವೈ 22 ಹೇಳಿಕೆಗೆ ವ್ಯಾಪಕ ಟೀಕೆ :ಕೈ-ದಳ ನಾಯಕರ ಆಕ್ರೋಶ

12:30 AM Mar 01, 2019 | |

ಬೆಂಗಳೂರು: “ಪುಲ್ವಾಮಾ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಬಾಲಾಕೋಟ್‌ನಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯಿಂದ ಪ್ರಧಾನಿ ನರೇಂದ್ರ ಮೋದಿ ಅಲೆ ಎದ್ದಿದ್ದು ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 22 ಸ್ಥಾನ ಗೆಲ್ಲಲಿದ್ದೇವೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ.

Advertisement

ಚಿತ್ರದುರ್ಗದಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾಧ್ಯಮಗಳ ಜತೆ ಮಾತನಾಡುವಾಗ ನೀಡಿದ ಹೇಳಿಕೆ ಗುರುವಾರ ಇಡೀ ದಿನ ಚರ್ಚೆಗೆ ಗ್ರಾಸವಾಗಿತ್ತು. ಭಯೋತ್ಪಾದಕರ ಮೇಲಿನ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಯಡಿಯೂರಪ್ಪ ಅವರ ಹೇಳಿಕೆ ಖಂಡನೀಯ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಬಿಎಸ್‌ವೈ ಹೇಳಿಕೆಗೆ ತೀವ್ರ ಟೀಕೆಗಳು ಕೇಳಿಬಂದಿದ್ದು, ಇದರ ಬೆನ್ನಲ್ಲೇ ಅವರು ಟ್ವೀಟ್‌ ಮೂಲಕ, ತಮ್ಮ ಹೇಳಿಕೆಗೆ ಬೇರೆ ರೀತಿಯ ವ್ಯಾಖ್ಯಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಯಡಿಯೂರಪ್ಪ, ದೇಶ ರಕ್ಷಣೆ ಮತ್ತು ಸೈನಿಕರ ವಿಚಾರದಲ್ಲಿ ರಾಜಕೀಯ ಲಾಭದ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದಾರೆ. ಸಂಸದ ಪ್ರತಾಪಸಿಂಹ ಸೇರಿ ಹಲವು ಬಿಜೆಪಿ ನಾಯಕರು ಯಡಿಯೂರಪ್ಪ ನೆರವಿಗೆ ಧಾವಿಸಿ, ಸಮಜಾಯಿಷಿ ನೀಡುವ ಯತ್ನ ಮಾಡಿದ್ದಾರೆ. ಪಾಕ್‌ ಮಾಧ್ಯಮದಲ್ಲೂ ಚರ್ಚೆ: ರಾಷ್ಟ್ರೀಯ ಹಾಗೂ ಪಾಕ್‌ ಮಾಧ್ಯಮಗಳಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷ ಇದನ್ನು ದಾಳವಾಗಿಸಿಕೊಂಡು ಟ್ವೀಟ್‌ ಮಾಡಿದೆ. “ಚುನಾವಣೆಯಲ್ಲಿ ಗೆಲ್ಲಲಿಕ್ಕಾಗಿಯೇ ಈ ಯುದ್ಧ ವನ್ನು ಬಳಸಿಕೊಳ್ಳಲಾಗುತ್ತಿದೆ. ಯುದ್ಧ  ದೇಶಕ್ಕಾಗಿ ಅಲ್ಲ. ಒಬ್ಬ ವ್ಯಕ್ತಿಯ ರಾಜಕೀಯ ಲಾಭಕ್ಕಾಗಿ ಯುದ್ಧವನ್ನು ಬಳಸಲು ಅವಕಾಶ ಕೊಡಬೇಡಿ” ಎಂದು ಹೇಳಿದೆ.

ಮಾಜಿ ಸಿಎಂ ಸಿದ್ದ ರಾಮಯ್ಯ ಅವರು ಸರಣಿ ಟ್ವೀಟ್‌ಗಳ ಮೂಲಕ ಯಡಿ ಯೂರಪ್ಪ ಹೇಳಿಕೆ ಖಂಡಿಸಿದ್ದಾರೆ. “ಹುತಾತ್ಮ ರಾದ ವೀರ ಯೋಧರ ಶವಗಳನ್ನು ಮುಂದಿಟ್ಟುಕೊಂಡು ಚುನಾವಣಾ ಲಾಭದ ಕನಸು ಕಾಣುತ್ತಿರುವ ಯಡಿಯೂರಪ್ಪ ಅವರ ರಾಜಕೀಯ ದುರಾಸೆಯ ಹೇಳಿಕೆಯನ್ನು ಖಂಡಿಸುತ್ತೇನೆ. ಮಡಿದ ಸೈನಿಕ ಕುಟುಂಬದವರ ಕಣ್ಣೀರು ಇನ್ನೂ ನಿಂತಿಲ್ಲ. ಆಗಲೇ ಸೀಟುಗಳ ಲೆಕ್ಕಾಚಾರ! ಅಸಹ್ಯಕರ’ ಎಂದಿದ್ದಾರೆ.

“ಬಿಜೆಪಿಯನ್ನು ಅರ್ಥ ಮಾಡಿಕೊಳ್ಳುವುದು ಅಚ್ಚರಿ ಹಾಗೂ ಅಸಹ್ಯಕರವೆನಿಸಿದೆ. ಪರಿಸ್ಥಿತಿ ತಿಳಿಯಾಗುವ ಮುನ್ನವೇ ಬಿಜೆಪಿಯು ಚುನಾವಣಾ ಲಾಭಕ್ಕಾಗಿ ಲೆಕ್ಕಾಚಾರ ನಡೆಸಿರುವುದು ದುರದೃಷ್ಟಕರ. ಯಾವ ದೇಶ ಭಕ್ತರೂ ಯೋಧರ ಸಾವಿನ ಲಾಭ ಪಡೆಯಲು ವಿಕೃತವಾಗಿ ಇಚ್ಛೆ ಪಡುವುದಿಲ್ಲ. ಕೇವಲ ರಾಷ್ಟ್ರೀಯತೆಯ ವಿರೋಧಿಗಳಷ್ಟೇ ಹೀಗೆ ಚಿಂತಿಸಬಹುದು. ಆರ್‌ಎಸ್‌ಎಸ್‌ ಈ ಬಗ್ಗೆ ಏನು ಹೇಳುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

Advertisement

“ಬಿಜೆಪಿಯವರು ಸೈನಿಕರ ಸಾಧನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಹೀನ. ಯಡಿಯೂರಪ್ಪ ಹಿರಿಯ ರಾಜಕಾರಣಿ ಯಾಗಿ ಈ ಮಟ್ಟಕ್ಕೆ ಇಳಿಯುತ್ತಾರೆಂದು ನಿರೀಕ್ಷಿಸಿರಲಿಲ್ಲ.ಬಿಜೆಪಿಯವರು ಸೈನಿಕರ ಹಾಗೂ ದೇಶದ ಜನರಕ್ಷಮೆ ಕೇಳಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಹತಾಶೆಗೊಂಡಿರುವ ಪ್ರತಿಪಕ್ಷಗಳಿಂದ ಗದ್ದಲ
ಈ ನಡುವೆ, ಯಡಿಯೂರಪ್ಪ ರಕ್ಷಣೆಗೆ ಧಾವಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, “ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ಭಾರತೀಯ ವಾಯುಪಡೆಯ ದಾಳಿ ಬಗ್ಗೆ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯ ಸಣ್ಣ ತುಣುಕನ್ನು ಇಟ್ಟುಕೊಂಡು ಹತಾಶೆಗೊಂಡಿರುವ ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ. ಅವರು ಕರ್ನಾಟಕದಲ್ಲಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬುದಾಗಿ ಬಹುದಿನಗಳಿಂದ ಹೇಳುತ್ತಲೇ ಇದ್ದಾರೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಯಡಿಯೂರಪ್ಪ ಹೇಳಿಕೆ ಒಪ್ಪಲಾರೆ
ಬಿಎಸ್‌ವೈ ಹೇಳಿಕೆಗೆ ಕೇಂದ್ರ ಸಚಿವ ವಿ.ಕೆ.ಸಿಂಗ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಯಡಿಯೂರಪ್ಪ ಅವರ ಹೇಳಿಕೆ ಯನ್ನು ನಾನು ಒಪ್ಪಲಾರೆ. ನಾವು ದೇಶಕ್ಕೆ ಬದ್ಧವಾಗಿದ್ದೇವೆ. ಸರ್ಕಾರ ತೆಗೆದುಕೊಂಡ ಕ್ರಮವು ನಮ್ಮ ದೇಶವನ್ನು ರಕ್ಷಿಸುವ ನಿಟ್ಟಿನದ್ದಾಗಿದೆ ಮತ್ತು ನಮ್ಮ ನಾಗರಿಕ ರಕ್ಷಣೆಯ ಉದ್ದೇಶದ್ದಾಗಿದೆ. ಕೆಲವು ಹೆಚ್ಚುವರಿ ಸೀಟುಗಳನ್ನು ಗೆಲ್ಲಲು ಈ ಕ್ರಮಗಳನ್ನು ಕೈಗೊಂಡಿಲ್ಲ. ಇದೇ ವಿಷಯವನ್ನು ಮಾಜಿ ಪ್ರಧಾನಿ ವಾಜಪೇಯಿ ಕೂಡ ಹೇಳಿದ್ದಾರೆ’ ಎಂದು ವಿ.ಕೆ.ಸಿಂಗ್‌ ಹೇಳಿದ್ದಾರೆ. ಅಲ್ಲದೆ ವಾಜಪೇಯಿ ಭಾಷಣದ ವಿಡಿಯೋವನ್ನೂ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.

ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗಿದೆ. ನಾನು ಬಿಜೆಪಿಗೆ ಅನುಕೂಲಕರ ವಾತಾವರಣ ಇದೆ ಎಂಬುದಾಗಿ ಹೇಳಿದ್ದು, ಇದೇ ಮಾತನ್ನು ಹಲವು ತಿಂಗಳಿನಿಂದ ಹೇಳುತ್ತಿದ್ದೇನೆ. ಪ್ರಧಾನಿ ಮೋದಿಜಿ ಅವರ ಸಮರ್ಥ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಕನಿಷ್ಠ 22 ಲೋಕಸಭೆ
ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದು ಇದೇ ಮೊದಲಲ್ಲ.

– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next