ಮೀರತ್: ಬಹುಜನ್ ಸಮಾಜ ಪಕ್ಷದ ಮುಖಂಡ, ಮಾಜಿ ಸಚಿವ ಹಾಜಿ ಯಾಕೂಬ್ ಖುರೇಷಿ ಒಡೆತನದ ಮಾಂಸದ ಫ್ಯಾಕ್ಟರಿ ಮೇಲೆ ಪೊಲೀಸರು, ತೂಕ ಮತ್ತು ಅಳತೆ ಇಲಾಖೆ, ಮಾಲಿನ್ಯ ಮಂಡಳಿ ಹಾಗೂ ಇತರ ಇಲಾಖೆಗಳ ಜಂಟಿ ತಂಡ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಮ್ಮ ಶತ್ರು ಬಿಜೆಪಿಯಲ್ಲ, ಆರ್ ಎಸ್ಎಸ್ :ಬಿ.ಕೆ.ಹರಿಪ್ರಸಾದ್
ಫ್ಯಾಕ್ಟರಿಯ ಪರವಾನಗಿ ಅವಧಿ ಮುಕ್ತಾಯಗೊಂಡಿದ್ದರೂ, ಅಲ್ಲಿ ಸಂಸ್ಕರಣೆ/ಪ್ಯಾಕೇಜಿಂಗ್ ಕೆಲಸ ಮುಂದುವರಿದಿರುವ ಬಗ್ಗೆ ದೂರು ಬಂದ ನಂತರ ದಾಳಿ ನಡೆಸಲಾಗಿದೆ. ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದ ಮಾಂಸದ ಸಂಗ್ರಹ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಮಿಶ್ರಾ ತಿಳಿಸಿದ್ದಾರೆ.
ಫ್ಯಾಕ್ಟರಿಯಲ್ಲಿ ಪತ್ತೆಯಾಗಿರುವ ಶಂಕಿತ ಗೋ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಪುರ್ ರಸ್ತೆಯಲ್ಲಿರು ಅಲ್ ಫಹೀಮ್ ಮೀಟೆಕ್ಸ್ ಪ್ರೈ. ಲಿಮಿಟೆಡ್ ಮಧ್ಯಪ್ರಾಚ್ಯ ಮತ್ತು ಇತರ ದೇಶಗಳಿಗೆ ಮಾಂಸವನ್ನು ರಫ್ತು ಮಾಡುತ್ತಿರುವುದಾಗಿ ವರದಿ ವಿವರಿಸಿದೆ.
ದಾಳಿ ಕುರಿತು ಪ್ರತಿಕ್ರಿಯಿಸಿರುವ ಹಾಜಿ ಯಾಕೂಬ್ ಪುತ್ರ ಇಮ್ರಾನ್ ಖುರೇಷಿ, ನಾನು ನಗರದಿಂದ ಹೊರಗಿದ್ದು, ದಾಳಿ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಆದರೆ ಫ್ಯಾಕ್ಟರಿಯಲ್ಲಿ ಯಾವುದೇ ಕಾನೂನು ಬಾಹಿರ ಕೆಲಸ ನಡೆಯುತ್ತಿಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಬಿಎಸ್ಪಿ ಮುಖಂಡ ಹಾಜಿ ಯಾಕೂಬ್ 2019ರಲ್ಲಿ ಉತ್ತರಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಜೇಂದ್ರ ಅಗರ್ವಾಲ್ ವಿರುದ್ಧ ಕಡಿಮೆ ಮತಗಳ ಅಂತರದಿಂದ ಪರಾಜಯಗೊಂಡಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಬಿಎಸ್ಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನ ಹೊಂದಿದ್ದ ಹಾಜಿ, 2006ರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಕ್ಯಾರಿಕೇಚರ್ ಬಿಡಿಸಿದ್ದ ಡ್ಯಾನಿಷ್ ಕಾರ್ಟೂನಿಷ್ಟ್ ತಲೆ ತೆಗೆಯಲು ಇನಾಮು ಘೋಷಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ ಎಂದು ವರದಿ ವಿವರಿಸಿದೆ.