ಸರ್ಕಾರ ರಚನೆಯಲ್ಲಿ ಬಿಎಸ್‌ಪಿ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದರು.
Advertisement
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಚೌಕೀದಾರ್ ನಾಟಕ ಆಡುತ್ತಿದ್ದಾರೆ. ದೇಶ ಭಕ್ತರ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ ಇಂಥವರ ಕೈಗೆ ದೇಶವನ್ನು ಮತ್ತೆ ಕೊಡಬೇಡಿ. ಈ ಸರ್ಕಾರ ದೇಶದ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಗಡಿ ಸುರಕ್ಷಿತವಾಗಿಲ್ಲ: ಐದು ವರ್ಷಗಳ ಆಡಳಿತದಲ್ಲಿ ಬಡವರು, ದಲಿತರು, ರೈತರು, ಆದಿವಾಸಿಗಳು, ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೂ ಮಾಡದೆ, ಈಗ ಚುನಾವಣೆ ಲಾಭಕ್ಕಾಗಿ ಆ ವರ್ಗಗಳಿಗೆ ಕಾರ್ಯಕ್ರಮಗಳನ್ನು
ಘೋಷಿಸುತ್ತಿದ್ದಾರೆ. ನೋಟು ರದ್ಧತಿ, ಜಿಎಸ್ಟಿಯಿಂದ ಬಡವರು, ಮಧ್ಯಮ ವರ್ಗ ಹಾಗೂ ವ್ಯಾಪಾರಿಗಳಿಗೆ ತೊಂದರೆ ಕೊಟ್ಟಿರುವ ಈ ಸರ್ಕಾರ ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ ನಡೆಸಿದೆ. ಕಾಂಗ್ರೆಸ್ ಬೋಫೋರ್ಸ್ ಹಗರಣ ಮಾಡಿದರೆ, ಬಿಜೆಪಿ ರಫೇಲ್ ಹಗರಣ ಮಾಡಿದೆ. ಚೌಕೀದಾರ್ ಎಂದು ಕರೆದುಕೊಳ್ಳುತ್ತಿರುವನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಗಡಿ
ಸುರಕ್ಷಿತವಾಗಿಲ್ಲ ಎಂದು ಟೀಕಿಸಿದರು. ವಿರೋಧ ಪಕ್ಷಗಳನ್ನು ಹಣಿಯಲು ಈ
ಸರ್ಕಾರ ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಂಡಿದೆ.
ಲೋಕಸಭಾ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳು ಸುಳ್ಳಿನ ಕಂತೆಗಳಾಗಿವೆ. ಬಿಎಸ್‌ಪಿ ಪ್ರಣಾಳಿಕೆಯಲ್ಲಿ ನಂಬಿಕೆ ಇರಿಸಿಲ್ಲ. ಬದಲಿಗೆ ಕಾರ್ಯಕರ್ತರ ಮೇಲೆ ವಿಶ್ವಾಸವಿರಿಸಿದೆ ಎಂದರು.
ಅಚ್ಚೇದಿನ್ ಬರಲಿಲ್ಲ 2014ರ ಚುನಾವಣೆ ಪೂರ್ವದಲ್ಲಿ ನರೇಂದ್ರಮೋದಿ ಅವರು ದೇಶದ ಜನತೆಗೆ ಅಚ್ಚೇದಿನ್ ತರುವುದಾಗಿ ಭರವಸೆನೀಡಿದ್ದರು. ಆದರೆ, ಈ ಐದು ವರ್ಷಗಳಲ್ಲಿ ಅವರಿಗೆ ಅಚ್ಚೇ ದಿನ್ ತರಲಾಗಲಿಲ್ಲ. ಇದು
ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ತೋರಿಸುತ್ತದೆ. ಬಡವರ ಖಾತೆಗಳಿಗೆ ತಲಾ 15 ಲಕ್ಷ ಜಮೆ ಮಾಡುವ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಾಗೇ ಉಳಿದಿದೆ. ಪ್ರಣಾಳಿಕೆಯ
ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರದ ಮೋದಿಗೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಉಳಿದಿಲ್ಲ. ಮೋದಿ ಜಾಗ ಖಾಲಿ ಮಾಡುವ ದಿನಗಳು ಹತ್ತಿರವಾಗಿವೆ ಎಂದರು. ಕರ್ನಾಟಕದಲ್ಲೂ ಪಕ್ಷ ಸಂಘಟನೆ ಬಲಗೊಳ್ಳುತ್ತಿದ್ದು, ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
Related Articles
ಮೈಸೂರು: ಈ ಚುನಾವಣೆಯಲ್ಲಿ ಹಣಬಲವುಳ್ಳವರು ಸೋಲಬೇಕು, ಜನ ಬಲ ಇರುವವರು ಗೆಲ್ಲಬೇಕು. ಬಿಎಸ್‌ಪಿಗೆ ಮತಹಾಕಿದರೆ ಮಾಯಾವತಿ ಪ್ರಧಾನಿ ಆಗುತ್ತಾರೆ ಎಂಬ ವಿಷಯವನ್ನು ಹಳ್ಳಿ ಹಳ್ಳಿಗಳಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಹುಜನ ಸಮಾಜ ಪಾರ್ಟಿಯ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಎಸ್‌ಪಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಉಳಿಸಿ ಕೊಳ್ಳಬೇಕಾದರೆ ಈ ಚುನಾವಣೆಯಲ್ಲಿ ಶೇ.6 ಮತ ಪಡೆಯಬೇಕು. 11 ಜನ ಸಂಸದರು ಗೆಲ್ಲಬೇಕು. ಆದರೆ, ಈ ಚುನಾವಣೆಯಲ್ಲಿ ಬಿಎಸ್‌ಪಿ 60 ರಿಂದ 70 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ಮನುವಾದಿಗಳನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ. ನಮ್ಮ
ಚುನಾವಣಾ ಕಾರ್ಯತಂತ್ರಗಳನ್ನು ಮುಂದಿನ ಎಂಟು ದಿನಗಳಲ್ಲಿ ಕಾರ್ಯಗತ ಮಾಡೋಣ ಎಂದರು. ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಪಕ್ಷಗಳು ಕಳೆದ 70 ವರ್ಷಗಳಿಂದ ಹಣದ ಮೂಲಕ ಮತವನ್ನು ಖರೀದಿಸಿ ಆಡಳಿತ ನಡೆಸುತ್ತಾ ಬಂದಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಬಿಎಸ್‌ಪಿಯನ್ನು ಮೂರನೇ ಶಕ್ತಿಯಾಗಿ ಬೆಳೆಸಿ. ಬಿಎಸ್‌ಪಿಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿಕೆ ನೀಡುವ ಮೂಲಕ ಬುದ್ಧಿಜೀವಿಗಳು ಬಿಎಸ್‌ಪಿ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ.
Advertisement
ಬಹುಜನ ಚಳವಳಿ ಯಾರನ್ನೋ ಉದ್ಧಾರ ಮಾಡಲು ಇಲ್ಲ.ಮನುವಾದಿಗಳ ದಬ್ಟಾಳಿಕೆ, ದೌರ್ಜನ್ಯ ವಿರೋಧಿಸುತ್ತಾ ಬಂದಿದೆ. ಕಾಂಗ್ರೆಸ್ ಚಮಚಾಗಳ ಈ ಪಿತೂರಿಗೆ ಮರುಳಾಗಬೇಡಿ, ಬಿಎಸ್‌ಪಿಗೆ ಮತ ಹಾಕಿ, ಹಳ್ಳಿ ಹಳ್ಳಿಗಳಲ್ಲಿಈ ವಿಷಯ ಮನವರಿಕೆ ಮಾಡಿಕೊಡಿ ಎಂದರು. ಪಕ್ಷದ ರಾಜ್ಯ ಉಸ್ತುವಾರಿಗಳಾದ ಡಾ.ಅಶೋಕ್ ಸಿದ್ಧಾರ್ಥ, ಎಂ.ಎಲ್.ತೋಮರ್, ಪಕ್ಷದ ರಾಜ್ಯಾಧ್ಯಕ್ಷ ಹರಿರಾಮ್, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸೇರಿದಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಬಿಎಸ್‌ಪಿ ಅಭ್ಯರ್ಥಿಗಳು ಹಾಜರಿದ್ದರು.