Advertisement

ಪ್ರಜಾಪ್ರಭುತ್ವ ಉಳಿವಿಗಾಗಿ ಬಿಎಸ್ಪಿ ಬೈಕ್‌ ರ್ಯಾಲಿ

02:43 PM Jan 16, 2018 | Team Udayavani |

ರಾಯಚೂರು: ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಬಹುಜನ ಸಮಾಜ
ಪಕ್ಷದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೈಕ್‌ ರ್ಯಾಲಿ ನಡೆಸಿದರು.

Advertisement

ಪಕ್ಷದ ಸಂಸ್ಥಾಪಕಿ ಮಾಯಾವತಿ ಅವರ 62ನೇ ಜನ್ಮದಿನಾಚರಣೆ ನಿಮಿತ್ತ ಜನಾಂದೋಲನ ಬೈಕ್‌ ರ್ಯಾಲಿ
ನಡೆಸಲಾಯಿತು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಿಂದ ಆರಂಭವಾದ ಬೈಕ್‌ ರ್ಯಾಲಿ ನಂತರ ನಗರದ
ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರ್ಯಾಲಿಯುದ್ದಕ್ಕೂ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಬಿಎಸ್ಪಿ ಕಾರ್ಯಕರ್ತರು
ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

70 ವರ್ಷದಿಂದ ಅ ಧಿಕಾರ ನಡೆಸಿದ ಕಾಂಗ್ರೆಸ್‌ ಹಾಗೂ ಬಿಜೆಪಿ ಸಂವಿಧಾನದ ಆಶಯಗಳನ್ನು ಸಮರ್ಪಕವಾಗಿ
ಜಾರಿಗೊಳಿಸುವಲ್ಲಿ ವಿಫಲಗೊಂಡಿವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವ ಪಾಲಿಸದೆ
ಉಳ್ಳವರಿಗೆ ಸೌಲಭ್ಯಗಳು ದಕ್ಕಿದ್ದು, ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ದೂರಿದರು.

ಅಸಮಾನತೆ, ಬಡತನ ಸೇರಿದಂತೆ ಅನೇಕ ಸಮಸ್ಯೆಗಳನ್ನು ದೇಶದ ಜನತೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ವ್ಯಾಪಾರ-ವಾಣಿಜ್ಯ, ಗ್ರಾಮೀಣ ಮತ್ತು ನಗರ-ಪಟ್ಟಣ ಪ್ರದೇಶಗಳಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಎಲ್ಲರಿಗೂ ಒಂದೇ ರೀತಿಯ ಗುಣಮಟ್ಟದ ಶಿಕ್ಷಣ ಲಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದ್ದು, ಅದನ್ನು ರಕ್ಷಿಸುವ ಮಹೋನ್ನತ ಜವಾಬ್ದಾರಿಯೊಂದಿಗೆ ಬಹುಜನ
ಸಮಾಜ ಪಕ್ಷದಿಂದ ಜ.15ರಿಂದ 26ವರೆಗೆ ಜನಾಂದೋಲನ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಸಂವಿಧಾನ ವಿರೋಧಿ ಧೋರಣೆ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂದು ದೇಶ ಅಸಮಾನತೆ, ಬಡತನ ಸೇರಿ ನಾನಾ ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದೆ. ದೇಶದಲ್ಲಿ ಇಂದಿಗೂ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರಿದರು.

Advertisement

ಸಂವಿಧಾನದತ್ತವಾಗಿರುವ ಸೌಲಭ್ಯಗಳನ್ನು ಪಡೆಯುವಲ್ಲಿ ತಳ ಸಮುದಾಯಗಳು ವಿಫಲವಾಗಿವೆ. ಹೀಗಾಗಿ ದೇಶದಲ್ಲಿ
ದಲಿತರ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಸಂವಿಧಾನದ ಆಶಯದಂತೆ ಎಲ್ಲ ಸಮುದಾಯಗಳು ಜನಸಂಖ್ಯೆಗೆ ಅನುಗುಣವಾಗಿ ಹಕ್ಕು ಪಡೆಯುವಲ್ಲಿ ವಿಫಲಗೊಂಡಿವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಎಸ್ಪಿಯಿಂದ ರಾಜ್ಯದ ಆರು ಕಡೆ ಏಕಕಾಲಕ್ಕೆ ರ್ಯಾಲಿ ನಡೆಸಲಾಗಿದ್ದು, ಜ.26ರಂದು ಮುಕ್ತಾಯಗೊಳ್ಳಲಿದೆ ಎಂದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ನರಸಪ್ಪ, ಜಿಲ್ಲಾಧ್ಯಕ್ಷ ಹನುಮಂತಪ್ಪ ಅತ್ತನೂರು, ನಗರಾಧ್ಯಕ್ಷ ಎನ್‌.
ಮಹಾವೀರ, ಕಾರ್ಯಕರ್ತರಾದ ಎ.ಜಯಣ್ಣ, ದೊಡ್ಡ ಮುರಾರಿ, ಮುಮ್ತಾಜುದ್ದೀನ್‌, ಹಣುಮಂತ ಭಂಡಾರಿ,
ಶ್ಯಾಮಸುಂದರ, ಹನುಮಂತರಾಯ ಕಪಗಲ್‌, ಎಂ.ಡಿ. ಜಲಾಲ್‌, ಭೀಮಣ್ಣ ಖಾಸಿಮಪ್ಪ, ಜಿಂದಪ್ಪ, ನಾಗರಾಜ
ದಂಡಿನ. ತಿಮ್ಮಪ್ಪ, ಸವಾರೆಪ್ಪ, ಶ್ರೀಧರ, ಅಬ್ದುಲ್‌ ಖದೀರ್‌. ಸಯ್ಯದ್‌ ಅಬ್ದುಲ್‌, ಜೇಮ್ಸ್‌, ಜಗ್ಗೇಶ, ನಾಗವಂಶಿ, ಶರಣಪ್ಪ ಬಲ್ಲಟಗಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next