ಹುಬ್ಬಳ್ಳಿ: ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಿಎಸ್ಸೆನ್ನೆಲ್ಗೆ ಗ್ರಾಮೀಣ ಭಾಗದ ದೂರವಾಣಿ ಕೇಂದ್ರ (ಎಕ್ಸ್‌ಚೇಂಜ್)ಗಳ ನಿರ್ವಹಣೆ ದುಸ್ತರವಾಗಿದ್ದು, ಹೆಸ್ಕಾಂ ಬಿಲ್ ಪಾವತಿಗೆ ಸಂಕಷ್ಟ ಬಂದೊದಗಿದೆ. ಹೀಗಾಗಿ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಡಿಮೆ ಸಂಪರ್ಕವಿರುವ ಅವಿಭಜಿತ ಧಾರವಾಡ ಜಿಲ್ಲೆಯ ದೂರವಾಣಿ ಕೇಂದ್ರಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆ.
ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ 169 ದೂರವಾಣಿ ಕೇಂದ್ರಗಳಿದ್ದು, ಸಿಬ್ಬಂದಿ ವೇತನ, ವಿದ್ಯುತ್ ಬಳಕೆ ಹಾಗೂ ನಿರ್ವಹಣೆ ವೆಚ್ಚ ಸೇರಿದಂತೆ ಪ್ರತಿ ಕೇಂದ್ರದ ಸರಾಸರಿ ವೆಚ್ಚ ತಿಂಗಳಿಗೆ ಸುಮಾರು 2ರಿಂದ 2.5 ಲಕ್ಷ ರೂ. ತಗಲುತ್ತದೆ. ಹೀಗಾಗಿ 20 ದೂರವಾಣಿ ಸಂಪರ್ಕ ಹೊಂದಿರುವ ಕೇಂದ್ರಗಳನ್ನು ಗುರುತಿಸುವ ಕಾರ್ಯ ನಡೆದಿದ್ದು, ಪಕ್ಕದ ಕೇಂದ್ರಗಳಿಗೆ ವಿಲೀನಗೊಳಿಸುವ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಯುತ್ತಿದೆ.
ಶೇ.35-40 ಕೇಂದ್ರಗಳು ವಿಲೀನವಾಗುವ ಸಾಧ್ಯತೆಗಳಿದ್ದು, ಅಲ್ಲಿನ ಸಿಬ್ಬಂದಿಯನ್ನು ಖಾಲಿ ಇರುವ ಕೇಂದ್ರಗಳಿಗೆ ಸ್ಥಳಾಂತರಿಸಿ ಗುತ್ತಿಗೆ ಸಿಬ್ಬಂದಿ ಕೈಬಿಡುವ ನಿರೀಕ್ಷೆಯಿದೆ.
ಹೆಸ್ಕಾಂ ಬಿಲ್ ಬಾಕಿ ಸಮಸ್ಯೆ: ದೂರವಾಣಿ ಕೇಂದ್ರಗಳ ವಿದ್ಯುತ್ ಬಿಲ್ ಪಾವತಿಗೂ ಮೂರು ತಿಂಗಳಿಂದ ಸಮಸ್ಯೆ ಎನ್ನುವಂತಾಗಿದೆ. ಇಲ್ಲಿಯವರೆಗೆ ಶಿರಗುಪ್ಪಿ, ಹೆಬಸೂರ, ದುಂಡಸಿ, ಗಜೇಂದ್ರಗಡ, ರೋಣ ಸೇರಿದಂತೆ ಕೆಲವೆಡೆ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಘಟನೆಗಳು ನಡೆದಿವೆ. ಎಲ್ಲಿ ತೀರಾ ಅನಿವಾರ್ಯವಾಗುತ್ತದೆಯೋ ಅಲ್ಲಿ ಬಾಕಿ ಭರಣ ಮಾಡುವ ಕೆಲಸ ನಡೆಯುತ್ತಿದೆ. ಕೆಲವೊಂದು ಕಡೆಗಳಲ್ಲಿ ಹೆಸ್ಕಾಂ ಹಿರಿಯ ಅಧಿಕಾರಿಗಳಿಗೆ ವಿದ್ಯುತ್ ಪೂರೈಸುವಂತೆ ಮನವಿ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.
ಕಟ್ಟಡ ಬಾಡಿಗೆಯೂ ಬಾಕಿ!: ಕೆಲವೆಡೆ ದೂರವಾಣಿ ಕೇಂದ್ರದ ಕಟ್ಟಡ ಬಾಡಿಗೆಯೂ ಬಾಕಿ ಉಳಿದಿದೆ. ಕಳೆದ 4-5 ತಿಂಗಳ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಕೇಂದ್ರ ಸರಕಾರದ ಸಂಸ್ಥೆ ಎನ್ನುವ ಕಾರಣಕ್ಕೆ ಕೆಲವೆಡೆ ಕಟ್ಟಡ ಮಾಲೀಕರು ಯಾವುದೇ ಸಮಸ್ಯೆ ಮಾಡುತ್ತಿಲ್ಲ. ಆದರೆ ಹೆಸ್ಕಾಂ ಸಿಬ್ಬಂದಿ ಎರಡ್ಮೂರು ತಿಂಗಳು ಕಳೆಯುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಕೇಂದ್ರದ ಕಾರ್ಯ ಸ್ಥಗಿತಗೊಳುತ್ತಿದೆ. ಮೂರ್‍ನಾಲ್ಕು ದಿನಗಳ ಕಾಲ ಡೀಸೆಲ್ ಹಾಕಿ ಜನರೇಟರ್ ಮೂಲಕ ಕೇಂದ್ರದ ಕಾರ್ಯ ನಡೆಸುವ ಪರಿಸ್ಥಿತಿಯೂ ಇಲ್ಲದಂತಾಗಿದೆ. ಕಳೆದ ಮೂರ್‍ನಾಲ್ಕು ದಿನಗಳ ಹಿಂದೆಯಷ್ಟೆ ಹುಬ್ಬಳ್ಳಿ ಅಕ್ಷಯ ಕಾಲೋನಿಯಲ್ಲಿರುವ ದೂರವಾಣಿ ಕೇಂದ್ರದ ಕಟ್ಟಡದ ಬಾಡಿಗೆ ನೀಡದ ಕಾರಣ ಮನೆ ಮಾಲೀಕ ಕೀಲಿ ಹಾಕಿದ್ದ ಘಟನೆಯೂ ನಡೆದಿತ್ತು.
ಸಂಸ್ಥೆ ವಾಹನಗಳ ತ್ಯಾಗ: ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿರುವ ಎಲ್ಲ ಅಧಿಕಾರಿಗಳಿಗೆ ನೀಡಿದ್ದ ವಾಹನಗಳನ್ನು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದಾರೆ. ಧಾರವಾಡ ಟೆಲಿಕಾಂ ಜಿಲ್ಲೆಯ ಬಿಎಸ್ಸೆನ್ನೆಲ್ ಪ್ರಧಾನ ವ್ಯವಸ್ಥಾಪಕರು ಕಳೆದ ಒಂದು ವಾರದಿಂದ ಕಚೇರಿ ಕಾರು ಬದಲು ಸ್ವಂತ ಕಾರಿನಲ್ಲಿ ಕಚೇರಿಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಗರಿಷ್ಠ ಪ್ರಮಾಣದಲ್ಲಿ ವೆಚ್ಚಕ್ಕೆ ಕಡಿವಾಣ ಹಾಕುವುದೊಂದೇ ಮುಂದಿರುವ ಮಾರ್ಗ ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದಂತಿದೆ.
ಅನಗತ್ಯ ವೆಚ್ಚಕ್ಕೆ ಕಡಿವಾಣ ಅನಿವಾರ್ಯ. ಹೀಗಾಗಿ ಒಂದಿಷ್ಟು ಕಾರ್ಯಗಳನ್ನು ಎತ್ತಿಕೊಳ್ಳಲಾಗಿದೆ. ಕೇಂದ್ರಗಳ ವಿಲೀನದಿಂದ ಜನರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹಿಂದಿಗಿಂತ ಪರಿಣಾಮಕಾರಿ ಸೇವೆ ದೊರೆಯಲಿದೆ.
• ಬಿಎಸ್ಸೆನ್ನೆಲ್ ಹಿರಿಯ ಅಧಿಕಾರಿ
•ಹೇಮರಡ್ಡಿ ಸೈದಾಪುರ