Advertisement

ಜನರ ಪರದಾಟ: ನಿಗಮದಿಂದ ದುರಸ್ತಿ

08:34 PM May 11, 2019 | Team Udayavani |

ವೇಣೂರು: ಕಳೆದೆರಡು ದಿನಗಳಿಂದ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಇಲ್ಲದೆ ಸ್ಥಿರ ದೂರವಾಣಿ, ಸಂಚಾರಿ ದೂರವಾಣಿ ಗ್ರಾಹಕರು ಸಮಸ್ಯೆ ಎದುರಿಸಿದ್ದು, ಶನಿವಾರ ಸಂಜೆ ನಿಗಮವು ದುರಸ್ತಿ ಮಾಡಿದೆ.

Advertisement

ಆಗಿದ್ದೇನು?
ವೇಣೂರು ಮೆಸ್ಕಾಂ ಉಪಕೇಂದ್ರದಿಂದ ವೇಣೂರಿನಿಂದ ಅಂಡಿಂಜೆ ಗ್ರಾಮಗಳಿಗೆ ಲಿಂಕ್‌ಲೈನ್‌ ಹಾಗೂ ಹಳೆಯ ವಿದ್ಯುತ್‌ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ವೇಣೂರು-ಅಂಡಿಂಜೆ ಬದಿಯಲ್ಲಿ ಬೃಹತ್‌ ವಿದ್ಯುತ್‌ ಕಂಬಗಳನ್ನು ಅಳವಡಿಸ ಲಾಗುತ್ತಿದೆ. ಇದಕ್ಕೆ ವೇಣೂರು ಶ್ರೀರಾಮ ನಗರದ ಬಳಿ ಯಂತ್ರದ ಮೂಲಕ ಗುಂಡಿ ತೆಗೆಯುವ ವೇಳೆ ಅಂಡಿಂಜೆ ಟವರ್‌ನಿಂದ ವೇಣೂರು ದೂರವಾಣಿ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸುವ ಪ್ರಮುಖ ಕೇಬಲ್‌ (ಒಎಫ್‌ಸಿ) ತುಂಡಾಗಿದ್ದು, ಸಮಸ್ಯೆಗೆ ಕಾರಣವಾಯಿತು. ಗುಂಡಿ ತೆಗೆಯುವ ವೇಳೆ ದೂರವಾಣಿ ನಿಗಮದ ಸಿಬಂದಿ ಜತೆಗಿದ್ದರೂ ಕೇಬಲ್‌ ತುಂಡಾಗಿರುವುದು ಬೇಜವಾಬ್ದಾರಿ ಆಗಿದೆ ಎಂದು ಜನರು ದೂರಿದ್ದಾರೆ.

ಸಂಪರ್ಕ ಇಲ್ಲದೆ ತೊಂದರೆ
ಒಂದು 3ಜಿ ಟವರ್‌, ಎರಡು 2ಜಿ ಟವರ್‌, 90ಕ್ಕೂ ಹೆಚ್ಚು ಬ್ರಾಂಡ್‌ಬ್ಯಾಂಡ್‌ಗಳು, 300ಕ್ಕೂ ಅಧಿಕ ಸ್ಥಿರ ದೂರವಾಣಿ, ಸಾವಿರಾರು ಮಂದಿ ಸಂಚಾರಿ ದೂರವಾಣಿ ಗ್ರಾಹಕರು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಟಿಎಂ ಸೇವೆಗಳು, ಸರಕಾರಿ ಆಸ್ಪತ್ರೆ, ಅಂಚೆ ಕಚೇರಿ, ಪೊಲೀಸ್‌ ಠಾಣೆ, ರೈತ ಸಂಪರ್ಕ ಕೇಂದ್ರ ಸಹಿತ ಸರಕಾರಿ, ಖಾಸಗಿ ಕಚೇರಿಗಳು ದೂರವಾಣಿ ಸಂಪರ್ಕ ಇಲ್ಲದೆ ತೊಂದರೆ ಅನುಭವಿಸುವಂತಾಯಿತು.

ವೇಣೂರು ನಗರ, ಪೆರಿಂಜೆ, ಅಂಡಿಂಜೆ ಭಾಗಗಳ ಎಲ್ಲ ಬ್ರಾಡ್‌ಬ್ಯಾಂಡ್‌, ಸ್ಥಿರ, ಸಂಚಾರಿ ದೂರವಾಣಿ ಎಲ್ಲ ಸಂಪರ್ಕಗಳು ಸ್ತಬ್ಧಗೊಂಡಿದ್ದವು. ನಾರಾವಿ, ಕೊಕ್ರಾಡಿ, ಹೊಸಂಗಡಿ, ಆರಂಬೋಡಿ, ಮೂಡುಕೋಡಿ, ಕುಕ್ಕೇಡಿ, ಪಡಂಗಡಿಗಳಲ್ಲೂ ನೆಟ್‌ವರ್ಕ್‌ ಲಭಿಸುತ್ತಿಲ್ಲ. ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಕೆಲವೇ ಹೊತ್ತಿನಲ್ಲಿ ಸಂಪರ್ಕ ಕಡಿತ ಗೊಳ್ಳುತ್ತದೆ. ಹಲವು ದಿನಗಳಿಂದ ಸಮಸ್ಯೆ ಇದ್ದು, ಬಿಎಸ್ಸೆನ್ನೆಲ್‌ ಸೇವೆ ಅಭಿವೃದ್ಧಿಗೊಳಿಸಲು ಗ್ರಾಹಕರು ಆಗ್ರಹಿಸಿದ್ದಾರೆ.

ಬ್ಯಾಂಕ್‌ ಗ್ರಾಹಕರ ಪರದಾಟ
ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ವೇಣೂರಿನ ಎರಡೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೇವೆ ವಿಳಂಬ ಗೊಂಡಿತು. ಶನಿವಾರ ಹಾಗೂ ರವಿವಾರ ಬ್ಯಾಂಕ್‌ಗಳಿಗೆ ರಜೆ ಇರುವ ಕಾರಣ ಶುಕ್ರವಾರ ಹೆಚ್ಚಿನ ಗ್ರಾಹಕರಿದ್ದರು. ನೆಟ್‌ವರ್ಕ್‌ ಈಗ ಬರಬಹುದು ಎಂದು ಕಾದು ಕುಳಿತ ಗ್ರಾಹಕರು ಸಂಜೆಯವರೆಗೂ ನೆಟ್‌ವರ್ಕ್‌ ಬಾರದೇ ಇದ್ದಾಗ ವಾಪಸಾಗಿದ್ದಾರೆ. ಬ್ಯಾಂಕ್‌ ಸಿಬಂದಿಯೂ ಸಮಸ್ಯೆ ಎದುರಿಸುವಂತಾಯಿತು.

Advertisement

ವಿದ್ಯುತ್‌ ಆಯಿತು, ಈಗ ಫೋನ್‌ !
ಕಳೆದ ಗುರುವಾರ ಮತ್ತು ಶುಕ್ರವಾರ ವೇಣೂರು ಪರಿಸರದಲ್ಲಿ ದಿನವಿಡೀ ವಿದ್ಯುತ್‌ ಇಲ್ಲದೆ ಜನ ಪರದಾಡಿದರು. ಅಭಿವೃದ್ಧಿ ಕಾರ್ಯ ಮಾಡುವ ವೇಳೆ ಸ್ವಲ್ಪ ಸಮಸ್ಯೆ ಆಗುವುದು ಸಾಮಾನ್ಯ ಎಂದು ಜನರು ಶನಿವಾರ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೂಂದು ಸಮಸ್ಯೆ ಅನುಭವಿಸುವಂತಾಯಿತು.

ಶನಿವಾರ ದುರಸ್ತಿ ಕಾರ್ಯ
ಮಂಗಳೂರಿನಿಂದ ಹೆಚ್ಚುವರಿಯಾಗಿ ನಿಗಮದ ಸಿಬಂದಿಯನ್ನು ಕರೆತರಲಾಗಿದ್ದು, ಶನಿವಾರ ಬೆಳಗ್ಗೆಯಿಂದ ದುರಸ್ತಿ ಕಾರ್ಯ ನಡೆಸಿ ಸಂಜೆ ವೇಳೆಗೆ
ಸಂಪರ್ಕ ಸರಿಯಾಗಿದೆ.

 ತುರ್ತಾಗಿ ದುರಸ್ತಿ ಕಾರ್ಯ
ವಿದ್ಯುತ್‌ ಕಂಬಕ್ಕೆ ಯಂತ್ರದ ಮೂಲಕ ಗುಂಡಿ ತೆಗೆಯುವ ವೇಳೆ ಒಎಫ್‌ಸಿ ಕೇಬಲ್‌ ತುಂಡಾಗಿದ್ದು, ಸಮಸ್ಯೆ ಆಗಿದೆ. ನಾನು ಸ್ಥಳದಲ್ಲಿದ್ದು, ತುರ್ತಾಗಿ ದುರಸ್ತಿ ಕಾರ್ಯ ನಡೆಸಿ ಶನಿವಾರ ಸಂಜೆ ವೇಳೆಗೆ ದುರಸ್ತಿ ಮಾಡಲಾಗಿದೆ.
– ರವೀಂದ್ರ, ಜೆ.ಟಿ.ಒ., ಬಿಎಸ್ಸೆನ್ನೆಲ್‌, ಬೆಳ್ತಂಗಡಿ

 ತಿಳಿಯದೆ ಸಮಸ್ಯೆ
ನೂತನವಾಗಿ ತಂತಿ ಜೋಡಣೆ, ಲಿಂಕ್‌ಲೈನ್‌ ಅಳವಡಿಕೆಗೆ ಶ್ರೀರಾಮ ನಗರದ ಬಳಿ ಕಂಬಕ್ಕೆ ಗುಂಡಿ ತೆಗೆಯುತ್ತಿದ್ದ ವೇಳೆ ಮಣ್ಣಿನಡಿಯಲ್ಲಿದ್ದ ದೂರವಾಣಿ ಸಂಪರ್ಕದ ಕೇಬಲ್‌ ತುಂಡಾಗಿದೆ. ದೂರವಾಣಿ ಸಂಪರ್ಕ ಇಲಾಖೆ ಸಿಬಂದಿ ಜತೆಗಿದ್ದರೂ ತಿಳಿಯದೆ ಸಮಸ್ಯೆ ಆಗಿದೆ. ಮಳೆಗಾಲದ ಪೂರ್ವಭಾವಿಯಾಗಿ ತುರ್ತಾಗಿ ಕೆಲಸಗಳು ನಡೆಯಬೇಕಿದ್ದರಿಂದ ಎರಡು ದಿನ ಪವರ್‌ ಕಟ್‌ ಮಾಡಬೇಕಾಯಿತು.
– ಬೂಬ ಶೆಟ್ಟಿ , ಮೆಸ್ಕಾಂ ಕಿರಿಯ ಎಂಜಿನಿಯರ್‌ (ಪ್ರಭಾರ)

Advertisement

Udayavani is now on Telegram. Click here to join our channel and stay updated with the latest news.

Next