ಶಿರಸಿ: ದೇಶದ ಏಕಮೇವ ಮಠಗಳ ಗ್ರಾಮ ಎಂದೇ ಹೆಸರಾದ ತಾಲೂಕಿನ ಸೋಂದಾ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಎಂದು ಫೋನ್ ಮಾಡಲು ಹೋದರೂ ನೆಟ್‌ವರ್ಕ್ ಇರೋದಿಲ್ಲ. ಹೀಗೆ ಬಂದ ಭಾರತ್ ಸಂಚಾರ ನಿಗಮದ ನೆಟ್‌ವರ್ಕ್ ಮಾತನಾಡುತ್ತಿದ್ದಾಗಲೇ ಮಂಗಮಾಯವಾಗುತ್ತದೆ. ಆಂಬ್ಯುಲೆನ್ಸ್‌ಗೆ ಫೋನ್ ಮಾಡಲೂ ಹೆಣಗಾಟ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
ಕಳೆದ ಆರೇಳು ತಿಂಗಳುಗಳಿಂದ ಸೋಂದಾ ಭಾಗದ ಸುಮಾರು 450ಕ್ಕೂ ಅಧಿ ಕ ಕುಟುಂಬಗಳಿಗೆ ಎರಡು ಸಾವಿರಕ್ಕೂ ಅ ಧಿಕ ಜನರಿಗೆ ಫೋನ್ ಗಗನ ಕುಸುಮ ಎಂಬಂತಾಗಿದೆ. ಎಲ್ಲ ಇದ್ದೂ ಇಲ್ಲದಂತಾದ ಸಂಪರ್ಕ ವ್ಯವಸ್ಥೆ ಕೊರೊನಾದಂತಹ ತುರ್ತು ಸಂದರ್ಭದಲ್ಲೂ ನೆರವಿಗೆ ಬಾರದೇ ಇದ್ದರೆ ಹೇಗೆ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ. ಸೋಂದಾ, ಮಠದೇವಳ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಸೇತುವಾಗಿದ್ದ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ದಿನದಲ್ಲಿ ಎರಡು ತಾಸು ನೆಟ್ಟಗೆ ಇದ್ದರೂ ದಾಖಲೆಯೇ ಎಂಬಂತಾಗಿದೆ.
ಮನೆಯಿಂದಲೇ ಕೆಲಸ ಮಾಡುವವರು, ಅನಿವಾರ್ಯವಾಗಿ ಸಂಪರ್ಕ ಮಾಡಬೇಕು ಎನ್ನುವರು, ಸೊಸೈಟಿ, ಪಂಚಾಯತ ವ್ಯವಸ್ಥೆಗೆ, ರೇಶನ್‌ಗೆ ಎಲ್ಲವಕ್ಕೂ ಟವರ್ ಪ್ರಾಬ್ಲಿಂ ಇದೆ. ಕೊರೋನಾ ಲಾಕ್‌ಡೌನ್ ಕಾಲದಲ್ಲಿ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎನ್ನುವ ಘೋಷಣೆ ಇಲ್ಲಿ ಅನಾರೋಗ್ಯದಲ್ಲಿ ಆಂಬ್ಯುಲೆನ್ಸ್ ತರಿಸಲೂ ಗುಡ್ಡ ಏರುವಂತಾಗಿದೆ. ಇದ್ದ ಖಾಸಗಿ ಟವರ್ ಒಂದರ ಮೊಬೈಲ್ ಸಂಪರ್ಕ ಬಂದರೆ ಪುಣ್ಯ ಎಂಬಂತಾಗಿದೆ.
ಔಡಾಳ, ಮೊಗದ್ದೆ, ಸೋಂದಾ, ಮಠದೇವಳ, ವಾಜಗದ್ದೆ, ಸೋಂದಾ ಪೇಟೆ ಎಲ್ಲಡೆ ಇದೇ ಸಮಸ್ಯೆ. ಔಡಾಳ, ಮೋಗದ್ದೆ, ಸೋಂದಾ, ಮಠದೇವಳದ ಬಿಎಸ್‌ಎನ್‌ಎಲ್ ಟವರ್‌ಗಳಿಗೆ ಭೆ„ರುಂಬೆ ಟವರ್‌ನ ಮೈಕ್ರೋವೇವ್ ಸಂಪರ್ಕ ಇದೆ. ಭೈರುಂಬೆ ಟವರ್ ಹಾಳಾದರೆ ಇಲ್ಲಿ ನೆಟ್‌ವರ್ಕ್ ಇಲ್ಲ. ಹೆಸ್ಕಾಂನಿಂದ ಭೈರುಂಬೆ ಟವರ್‌ಗೆ ಕರೆಂಟ್ ಕೊಡಲಾಗಿದೆ. ಅಲ್ಲಿ ಪವರ್ ಕಟ್ ಆದರೂ ಈ ಟವರ್ ನಾಲ್ಕೂ ನೆಟ್‌ವರ್ಕ ಹೊಗುತ್ತದೆ. ಹುಲೇಕಲ್ ಭಾಗದಿಂದ ಈ ನಾಲ್ಕೂ ಟವರ್ ಗೆ ಕರೆಂಟ್ ಕೊಡಲಾಗಿದೆ. ಇಲ್ಲಿ ಕರೆಂಟ್ ತೆಗೆದರೆ ಮತ್ತೆ ನೆಟ್‌ವರ್ಕ ಇಲ್ಲ! ಟವರ್‌ಗಳಿಗೆ ಬ್ಯಾಟರಿ, ಜನರೇಟರ್ ಯಾವುದೂ ಇಲ್ಲ!. ಇರೋದಕ್ಕೆ ದರಸ್ತಿಯೂ ಆಗಿಲ್ಲ. ಅನಿವಾರ್ಯವಾಗಿ ಕಾಲ್ ಮಾಡಬೇಕು ಎಂದರೂ ಐದು ಕಿಮೀ ಆಚೆ ಹೋದರೆ ಬಕ್ಕಳ, ಶಿರಸಿ ನೆಟ್‌ವರ್ಕ್ ಸಿಗಬಹುದು. ಕಳೆದ ಆರು ತಿಂಗಳುಗಳಿಂದ ಸೋಂದಾ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಕತೆ ಇದೇ ಆಗಿದೆ. ಇಂಟರ್ ನೆಟ್ ಬಿಡಿ, ಮಾತನಾಡಲೂ ಆಗದಂತೆ ಆಗುತ್ತಿದೆ ಎನ್ನುತ್ತಾರೆ ಸೋಂದಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಭಂಡಾರಿ.