ನವದೆಹಲಿ: ಕೇಂದ್ರಸರ್ಕಾರ ಅಧೀನದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಅನ್ನು ವಿಲೀನಗೊಳಿಸುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ. ತಕ್ಷಣಕ್ಕೆ ಈ ವಿಲೀನ ಕಾರ್ಯಸಾಧುವಲ್ಲ ಎಂದು ಸರ್ಕಾರವೇ ನೇಮಿಸಿದ ಡೆಲಾಯ್ಟ್ ಆ್ಯಂಡ್ ಎಲ್‌ಎಲ್‌ಪಿ ಸೆಲ್ಸ್ ಸಂಸ್ಥೆ ಸಲಹೆ ನೀಡಿದ್ದೇ ಇದಕ್ಕೆ ಕಾರಣ. ಸದ್ಯ ಬಿಎಸ್ ಎನ್‌ಎಲ್, ದೆಹಲಿ ಮತ್ತು ಮುಂಬೈ ಹೊರತುಪಡಿಸಿ, ದೇಶದ ಉಳಿದೆಲ್ಲೆಡೆ ತನ್ನ ಸೇವೆ ಹೊಂದಿದೆ. ಎಂಟಿಎನ್‌ಎಲ್ ದೆಹಲಿ-ಮುಂಬೈನಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಈ ಎರಡು ಸಂಸ್ಥೆಗಳನ್ನು ವಿಲೀನ ಮಾಡುವುದಕ್ಕೆ ಮುನ್ನ ಬಿಎಸ್‌ಎನ್‌ಎಲ್‌ಗೆ ದೆಹಲಿ-ಮುಂಬೈನಲ್ಲೂ 2ಜಿ, 4ಜಿ ತರಂಗಾಂತರ ನೀಡಬೇಕು. ಆಗದು ಇಡೀ ದೇಶಾದ್ಯಂತ ಕಾರ್ಯಾಚರಿಸಲು ಅನುಕೂಲವಾಗುತ್ತದೆ ಎಂದು ಡೆಲಾಯ್ಟ್ ಸಲಹೆ ನೀಡಿದೆ. ಬಿಎಸ್‌ಎನ್‌ಎಲ್-ಎಂಟಿಎನ್‌ಎಲ್ ಸಂಸ್ಥೆಗಳನ್ನು ತಕ್ಷಣಕ್ಕೆ ವಿಲೀನ ಮಾಡುವುದರಿಂದ 45,000 ಕೋಟಿ ರೂ. ಸಾಲ ಉಂಟಾಗುತ್ತದೆ. ತಕ್ಷಣ ಇದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಡೆಲಾಯ್ಟ್ ಹೇಳಿದೆ. ಕಳೆದ ವರ್ಷ ಬಿಎಸ್‌ಎನ್ ಎಲ್ ಹಾಗೂ ಎಂಟಿಎನ್‌ಎಲ್ ವಿಲೀನಕ್ಕೆ ಸರ್ಕಾರ ಅನುಮತಿ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.