Advertisement
ಈ ದೂರವಾಣಿ ಕೇಂದ್ರವು ಕುತ್ಯಾರು,ಕಳತ್ತೂರು, ಚಂದ್ರನಗರ, ಪಾದೂರು, ಪಂಜಿಮಾರು , ಬಿ.ಸಿ.ರೋಡ್, ಮಟ್ಟಾರು, ಪಿಲಾರುಕಾನ, ಜಾಲಮೇಲು ಹಾಗೂ ಶಿರ್ವ- ಮಂಚಕಲ್ ವ್ಯಾಪ್ತಿಯಲ್ಲಿ ಅತ್ಯಧಿಕ ಬಳಕೆದಾರರನ್ನು ಹೊಂದಿದೆ. ಇಲ್ಲಿನ ಹೆಚ್ಚಿನವರು ವಿದೇಶಗಳಲ್ಲಿ ದುಡಿಯುತ್ತಿದ್ದು, ಅಂತರ್ಜಾಲ, ಮೊಬೈಲ್ ನೆಟ್‌ವರ್ಕ್ ಅಗತ್ಯವಾಗಿದೆ.
ಗ್ರಾಮೀಣ ಪ್ರದೇಶವಾದರೂ ಶಿರ್ವ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 9 ರಾಷ್ಟ್ರೀಕೃತ ಬ್ಯಾಂಕ್‌ಗಳು, ಕೇಂದ್ರ ಸಹಕಾರಿ ಬ್ಯಾಂಕ್ ಸಹಿತ ಹಲವಾರು ಸಹಕಾರಿ ಹಾಗೂ ಖಾಸಗಿ ಬ್ಯಾಂಕ್ ಶಾಖೆಗಳಿವೆ. ಶಾಲಾ ಕಾಲೇಜುಗಳು, ವ್ಯವಹಾರಸ್ಥರು ಇದ್ದು ಹೆಚ್ಚಿನವರು ಇಂಟರ್ನೆಟ್ ಬಳಕೆದಾರರು. ಆದರೆ ಇಲ್ಲಿ ಬಿಎಸ್‌ಎನ್ ಇಂಟರ್ನೆಟ್ ಸಮಸ್ಯೆಯಿಂದ ಕೆಲವರು ಖಾಸಗಿ ನೆಟ್‌ವರ್ಕ್‌ಗಳ ಮೊರೆಹೋಗಿದ್ದಾರೆ. ದೂರವಾಣಿ ಅಸ್ತವ್ಯಸ್ತ
ಸುಮಾರು 2000ಕ್ಕೂ ಹೆಚ್ಚು ದೂರವಾಣಿ ಬಳಕೆದಾರರನ್ನು ಹೊಂದಿದ್ದ ಕೇಂದ್ರದಲ್ಲಿ ಸೇವೆ ಕೊರತೆಯಿಂದಾಗಿ ಈಗ 600 ಸಂಪರ್ಕಗಳು ಮಾತ್ರ ಇದೆ. ಶಿರ್ವ ಹಾಗೂ ಕುತ್ಯಾರು ಪರಿಸರದಲ್ಲಿ ಖಾಸಗಿ ಸಂಸ್ಥೆಯ ಭೂಗತ ಓಎಫ್‌ಸಿ ಕೇಬಲ್ ಅಳವಡಿಸಲು ರಸ್ತೆ ಬದಿ ಅಗೆತ ನಡೆಸಿದ್ದು ಶಿರ್ವದಿಂದ ಕುತ್ಯಾರುವರೆಗೆ 8-10 ಕಡೆ ದೂರವಾಣಿ ಕೇಬಲ್‌ಗಳು ತುಂಡಾಗಿದ್ದು ದೂರಸಂಪರ್ಕ ಅಸ್ತವ್ಯಸ್ತಗೊಂಡಿದೆ.
Related Articles
ಅತೀ ದೊಡ್ಡ ದೂರವಾಣಿ ಕೇಂದ್ರವಾಗಿರುವ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೆಟಿಒ ನಿವೃತ್ತರಾಗಿ 3 ತಿಂಗಳುಗಳೇ ಕಳೆದರೂ ಬದಲಿ ಅಧಿಕಾರಿಯ ನೇಮಕವಾಗಿಲ್ಲ. 3 ಲೈನ್‌ಮ್ಯಾನ್ ಮತ್ತು ಓರ್ವ ಸಿಬಂದಿ ಪೂರ್ಣಕಾಲಿಕವಿದ್ದು ಇಬ್ಬರು ಗುತ್ತಿಗೆ ಕಾರ್ಮಿಕರಿದ್ದಾರೆ. ಕಳೆದ 4 ತಿಂಗಳಿನಿಂದ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ.
Advertisement
ಕರ್ತವ್ಯದಲ್ಲಿದ್ದ ಸಿಬಂದಿ ರಜೆಯಲ್ಲಿ ತೆರಳಿದರೆ ಬದಲಿ ವ್ಯವಸ್ಥೆಯಿಲ್ಲ. ಜತೆಗೆ ತಾಂತ್ರಿಕ ಸಿಬಂದಿಯ ಕೊರತೆ ಇದೆ. ಕಾಮಗಾರಿಗಳ ವೇಳೆ ಕೇಬಲ್‌ಗಳು ತುಂಡಾದರೆ ಸರಿಪಡಿಸಲು ಸಲಕರಣೆಗಳ ಕೊರತೆಯೂ ಇದೆ.
ಟವರ್ ಕೆಳಗೇ ನೆಟ್‌ವರ್ಕ್ ಇಲ್ಲ! ದೂರವಾಣಿ ಕೇಂದ್ರದ ಮೊಬೈಲ್ ಟವರ್‌ನಲ್ಲಿ ರೇಂಜ್ ಕೊರತೆಯಿದೆ. ಟವರ್‌ನ ಸುತ್ತಮುತ್ತ ಅರ್ಧಕಿ.ಮೀ.ವ್ಯಾಪ್ತಿಯಲ್ಲಿ ಕೂಡ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎನ್ನುವುದು ಸಾಮಾನ್ಯವಾಗಿದೆ. ಖಾಸಗಿ ಮೊಬೈಲ್ ಕಂಪೆನಿಗಳು 4ಜಿ ನೆಟ್‌ವರ್ಕ್ ಸೇವೆ ನೀಡುತ್ತಿದ್ದರೂ ಶಿರ್ವದ ಬಿಎಸ್ಸೆನ್ನೆಲ್ ಮೊಬೈಲ್ 3ಜಿ ನೆಟ್‌ವರ್ಕ್‌ಸೇವೆ ದೂರವಾಣಿ ಕೇಂದ್ರದ ಗೋಡೆಯಲ್ಲಿ ಬರಹಕ್ಕೆ ಮಾತ್ರ ಸೀಮಿತವಾಗಿದೆ. ಪ್ರಯೋಜನವಾಗಿಲ್ಲ
ಶಿರ್ವಪೊಲೀಸ್ ಠಾಣೆ ಪರಿಸರದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಸಂಪರ್ಕ ಸಿಗುತ್ತಿಲ್ಲ.ಸಾರ್ವಜನಿಕರ ಕರೆ ನಾಟ್ ರೀಚೆಬಲ್ ಆಗುತ್ತದೆ. ಖಾಸಗಿ ನೆಟ್‌ವರ್ಕ್‌ನ ವೈಯಕ್ತಿಕ ನಂಬರ್‌ನಲ್ಲಿ ವ್ಯವಹರಿಸುತ್ತಿದ್ದೇವೆ.ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ವ್ಯವಹಾರ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಅಬ್ದುಲ್ ಖಾದರ್,ಶಿರ್ವ ಪಿಎಸ್‌ಐ. ಸಿಬಂದಿ ಸಮಸ್ಯೆ
ಇಲಾಖೆಯಲ್ಲಿ ಸಿಬಂದಿ ಸಮಸ್ಯೆಯಿದ್ದು ಲಭ್ಯವಿದ್ದ ಸಿಬಂದಿಯನ್ನೇ ಹೊಂದಾಣಿಕೆ ಮಾಡಿಕೊಳ್ಳಬೇಕು.ಮೊಬೈಲ್ ರೇಂಜ್ ನೆಟ್‌ವರ್ಕ್ ಬಗ್ಗೆ ಮೊಬೈಲ್ ವಿಂಗ್‌ಗೆ ತಿಳಿಸಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
– ರಾಮಚಂದ್ರ,
ಎಜಿಎಂ, ಬಿಎಸ್ಸೆನ್ನೆಲ್, ಉಡುಪಿ – ಸತೀಶ್ಚಂದ್ರ ಶೆಟ್ಟಿ ಶಿರ್ವ.