ರಾಯಚೂರು: ಬಿಎಸ್‌ಎನ್‌ಎಲ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರಿಗೆ ಬಾಕಿ ಇರುವ ಐದು ತಿಂಗಳ ವೇತನ ಪಾವತಿಸಬೇಕು, ನಿಯಮಬಾಹಿರವಾಗಿ ವಜಾಗೊಳಿಸಿದ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಿಎಸ್‌ಎನ್‌ಎಲ್ ಕ್ಯಾಶುವಲ್-ಕಾಂಟ್ರಾಕ್ಟರ್ ಕಾರ್ಮಿಕರ ಯೂನಿಯನ್‌ನಿಂದ (ಸಿಐಟಿಯು ಸಂಯೋಜಿತ) ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆ ಸದಸ್ಯರು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗುತ್ತಿಗೆ ಕಾರ್ಮಿಕರ ಶ್ರಮಕ್ಕೆ ಬೆಲೆ ಇಲ್ಲದಾಗಿದೆ. ರಾಯಚೂರು-ಕೊಪ್ಪಳ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಸುಮಾರು ಒಂದೂವರೆ ದಶಕದಿಂದ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳು ನೀಡದೆ ವಂಚಿಸಲಾಗುತ್ತಿದೆ. ರಾಯಚೂರು ವಿಭಾಗದ 41 ಕಾರ್ಮಿಕರನ್ನು ಯಾವುದೇ ಮಾಹಿತಿ ನೀಡದೇ, ವೇತನವನ್ನೂ ಪಾವತಿಸದೇ ಕಾನೂನಿಗೆ ವಿರುದ್ಧವಾಗಿ ವಜಾಗೊಳಿಸಲಾಗಿದೆ ಎಂದು ದೂರಿದರು.
ಅಲ್ಲದೇ, ಐದು ತಿಂಗಳಿಂದ ಗುರುತಿನ ಚೀಟಿ, ವೇತನ ಪಾವತಿ ಚೀಟಿ, ಬೋನಸ್, ಕನಿಷ್ಠ ಕೂಲಿ, ಭವಿಷ್ಯ ನಿಧಿಯ ವಾರ್ಷಿಕ ವರದಿ ಯಾವುದನ್ನೂ ನೀಡದೇ ಗುತ್ತಿಗೆ ಕಾರ್ಮಿಕರ ಕಾಯ್ದೆ ಉಲ್ಲಂಘಿಸಲಾಗಿದೆ. ಈ ಬಗ್ಗೆ ಸಂಸ್ಥೆಯ ಮೇಲಧಿಕಾರಿಗಳಿಗೆ ದೂರಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಗುತ್ತಿಗೆ ಕಾರ್ಮಿಕರ ಮರುನೇಮಕಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಇದರ ಪ್ರತಿಯನ್ನು ಸಂಸ್ಥೆಯ ಮಹಾಪ್ರಬಂಧಕರಿಗೆ ನೀಡಲಾಗಿದೆ. ಆದರೂ ಮರುನೇಮಕ ಮಾಡಿಕೊಂಡಿಲ್ಲ. ಕೂಡಲೇ ಬಾಕಿ ವೇತನ ಪಾವತಿಸಬೇಕು. ನಿಯಮಬಾಹಿರವಾಗಿ ವಜಾ ಮಾಡಿದ 41 ಜನ ಕಾರ್ಮಿಕರ ಮರುನೇಮಕ ಮಾಡಬೇಕು. ಕನಿಷ್ಠ ವೇತನ ಹಾಗೂ ಹೆಚ್ಚುವರಿ ಬಾಕಿ ವೇತನ ಪಾವತಿಗೆ ಮುಂದಾಗಬೇಕು. ಗುತ್ತಿಗೆ ಕಾರ್ಮಿಕರ ಕಾಯ್ದೆ ಪ್ರಕಾರ ಗುರುತಿನ ಚೀಟಿ, ವೇತನ ಪಾವತಿ ಚೀಟಿ, ಪಿಎಫ್, ವಾರ್ಷಿಕ ವರದಿ ಪಟ್ಟಿ ನೀಡಬೇಕು ಮತ್ತು ಪ್ರತಿ ತಿಂಗಳು 7ನೇ ತಾರೀಖೀನ ಒಳಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಗೌರವಾಧ್ಯಕ್ಷ ಶೇಕ್ಷಾ ಖಾದ್ರಿ, ಮುಖಂಡರಾದ ಡಿ.ಎಸ್.ಶರಣಬಸವ, ವಿಜಯರಾವ್ ಗೋನ್ವಾರ, ಆರ್.ವೆಂಕಟೇಶ, ಗೌತಮ್, ಪ್ರದೀಪ, ಧರ್ಮೆಂದ್ರ ವಿಜಯ, ವಿಠuಲ, ಮಂಜುನಾಥ, ಮೃತ್ಯುಂಜಯ, ಅನೀಫ್, ಸೈಯ್ಯದ್, ಸುರೇಶ, ವಿಶ್ವನಾಥ ರೆಡ್ಡಿ, ಭೀಮಣ್ಣ, ಯಲ್ಲಪ್ಪ ಇತರರು ಇದ್ದರು.