Advertisement

BSNL ಗುತ್ತಿಗೆ ನೌಕರರಿಗೆ ಇದು ಎಪ್ರಿಲ್‌ ಫ‌ೂಲ್‌ ಅಲ್ಲ! 

01:47 PM Apr 06, 2018 | Karthik A |

ಸುಬ್ರಹ್ಮಣ್ಯ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ BSNL ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಪೈಕಿ ಹಲವರಿಗೆ ಎ. 1 ರಿಂದ ಕೆಲಸ ನಿರಾಕರಣೆಯ ಆದೇಶ ನೀಡಲಾಗಿದೆ. ಇದರಿಂದ ಕಂಗೆಟ್ಟಿರುವ ಸಂಸ್ಥೆಯ ಎಲ್ಲ ಗುತ್ತಿಗೆ ನೌಕರರು ಕೆಲಸದಿಂದ ವಜಾ ಮಾಡಿದಲ್ಲಿ ಕುಟುಂಬ ಸದಸ್ಯರ ಸಹಿತ ಸಾಮೂಹಿಕವಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆ ಸಂಸ್ಥೆಯಾಗಿರುವ BSNL ಆಡಳಿತ ಮಂಡಳಿಯು ಆರ್ಥಿಕ ಮಿತವ್ಯಯ ಸಾಧಿಸಲು ಹಾಗೂ ನಷ್ಟದ ಕಾರಣವನ್ನು ಮುಂದಿಟ್ಟು ಎ. 1ರಿಂದ ದೇಶಾದ್ಯಂತ ತನ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಉದ್ಯೋಗ ಕಡಿತಕ್ಕೆ ಮುಂದಾಗಿತ್ತು. ಅದರಂತೆ ದ. ಕನ್ನಡ ಮತ್ತು ಉಡುಪಿಯ 85 ಮಂದಿಯ ಪಟ್ಟಿ ಪ್ರಧಾನ ಕಚೇರಿಯಲ್ಲಿ ಸಿದ್ಧಗೊಂಡಿದ್ದು, ಜಿಲ್ಲೆಯ ಕೆಲವು ಕಚೇರಿಗಳ ಸಿಬಂದಿಗೆ ಅಧಿಕಾರಿಗಳು ಎ. 1ರಿಂದ ಕೆಲಸಕ್ಕೆ ಬರದಂತೆ ತಿಳಿಸಿದ್ದಾರೆ.

Advertisement

ಇದರಿಂದ ಬೇಸತ್ತಿರುವ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರು ಹತಾಶೆಯಿಂದ ಮತದಾನ ಬಹಿಷ್ಕರಿಸಲು ಅಥವಾ ನೋಟಾ ಹಕ್ಕು ಚಲಾಯಿಸಿ ತಮ್ಮ ಅತೃಪ್ತಿ ತೋರ್ಪಡಿಸುವುದಕ್ಕೆ ಮುಂದಾಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಕೆಲಸ ಕಳಕೊಂಡ ಗುತ್ತಿಗೆ ಕಾರ್ಮಿಕರು ಹಾಗೂ ಕೆಲಸದಲ್ಲಿ ಉಳಿದುಕೊಂಡ ಗುತ್ತಿಗೆ ಕಾರ್ಮಿಕರ ಕೆಲ ಪ್ರಮುಖರು ಮಂಗಳೂರಿನಲ್ಲಿ ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಎರಡೂ ಜಿಲ್ಲೆಗಳ ಒಟ್ಟು 693 ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಮತದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ 800 ಮಂದಿ
ಸಂಸ್ಥೆಯ ಈ ನಿರ್ಧಾರದಿಂದ ಮಂಗಳೂರು ಪ್ರಧಾನ ಕಚೇರಿ ಹಾಗೂ ಜಿಲ್ಲೆಯ ತಾಲೂಕುಗಳಲ್ಲಿ 473 ಮಂದಿ, ಉಡುಪಿಯಲ್ಲಿ 220 ಕಾರ್ಮಿಕರು ಕೆಲಸ ಕಳಕೊಳ್ಳಲಿದ್ದಾರೆ. ಇನ್ನುಳಿದ ಗುತ್ತಿಗೆ ಕಾರ್ಮಿಕರನ್ನು ಕೂಡ ವಜಾಗೊಳಿಸುವ ಸಂಭವ ಇರುವುದರಿಂದ ನ್ಯಾಯಕ್ಕಾಗಿ ಸಾಮೂಹಿಕ ಮತ ಬಹಿಷ್ಕಾರ ನಿರ್ಧಾರಕ್ಕೆ ಬಂದಿರುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 800 ಮಂದಿ ಕೆಲಸ ಕಳಕೊಳ್ಳಲಿದ್ದಾರೆ.

BSNLನಲ್ಲಿ ದೇಶವ್ಯಾಪಿಯಾಗಿ ಸುಮಾರು ಒಂದೂವರೆ ಲಕ್ಷ ಮಂದಿ ಗುತ್ತಿಗೆ ಆಧಾರದಲ್ಲಿ ಕೇಬಲ್‌, ಹೌಸ್‌ ಕೀಪಿಂಗ್‌, ಸೆಕ್ಯೂರಿಟಿ, ಆಪ್ಟಿಕಲ್‌ ಫೈಬರ್‌ ಕೇಬಲ್‌ ಇತ್ಯಾದಿ ವಿಭಾಗಗಳಲ್ಲಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 4,000 ಮತ್ತು ಅವಿಭಜಿತ ದ.ಕ. ಜಿಲ್ಲೆಯಲ್ಲಿ 693 ಮಂದಿ ಗುತ್ತಿಗೆ ಕಾರ್ಮಿಕರಿದ್ದಾರೆ. ಇವರಲ್ಲಿ ಹಲವರು BSNL ಸಂಸ್ಥೆಯು ಟೆಲಿಕಾಂ ಇಲಾಖೆ ಆಗಿದ್ದಾಗಿನಿಂದಲೇ ಉದ್ಯೋಗ ನಿರ್ವಹಿಸುತ್ತ ಬಂದಿದ್ದಾರೆ. ಟೆಲಿಕಾಂ ಇಲಾಖೆಯು BSNL ಆದಂದಿನಿಂದಲೂ ಸಂಸ್ಥೆಯ ಪ್ರಧಾನ ಕಚೇರಿ, ಎಕ್ಸ್‌ಚೇಂಜ್‌, OFC ರೂಟ್‌ಗ‌ಳು, ಕಚೇರಿಗಳಲ್ಲಿ ಭದ್ರತೆ, ಅಪ್‌ ಕೀಪಿಂಗ್‌, ಸೆಕ್ಯೂರಿಟಿ ಇತ್ಯಾದಿ ಕೆಲಸಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು ಕೆಲಸ ನಿರ್ವಹಿಸಲಾಗುತ್ತಿತ್ತು. ಈ ಹಿಂದೆಯೂ ಸಂಸ್ಥೆ ಕಾರ್ಮಿಕರ ಪ್ರಬಲ ವಿರೋಧದ ನಡುವೆ ಸಿಬಂದಿ ಕಡಿಗೊಳಿಸಿತ್ತು. ಇದೀಗ ಶೇ.20ರಷ್ಟು ಸಿಬಂದಿ ಕಡಿತಕ್ಕೆ ಮುಂದಾಗಿರುವುದು ಗುತ್ತಿಗೆ ಕಾರ್ಮಿಕರಿಗೆ ನುಂಗಲಾರದ ತುತ್ತಾಗಿದೆ.

ಸುದೀರ್ಘ‌ ಅವಧಿಯ ತನಕ ಮೂಲ ಸೌಕರ್ಯ ಹಾಗೂ ಉದ್ಯೋಗ ಭದ್ರತೆ ಇಲ್ಲದೆ ದುಡಿಯುತ್ತಿದ್ದ ಕಾರ್ಮಿಕರಿಗೆ ಸಂಸ್ಥೆ ಇದು ವರೆಗೆ ಹಲವಾರು ಸವಲತ್ತುಗಳನ್ನು ನಿರಾಕರಿಸಿತ್ತು. ಈಗ ಸಿಬಂದಿ ಕಡಿತಕ್ಕೆ ಮುಂದಾಗಿರುವುದರಿಂದ ಕೆಲಸವಿಲ್ಲದೆ ಬೀದಿಗೆ ಬಿದ್ದಿರುವ ಕಾರ್ಮಿಕರ ಮತ್ತು ಅವರ ಕುಟುಂಬಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರ್ಯಾಯ ಉದ್ಯೋಗದ ಅವಕಾಶವೂ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಸಂಸ್ಥೆಯಲ್ಲಿ ಸಿಬಂದಿ ಕೊರತೆ ಇದ್ದರೂ ದೂರವಾಣಿ, ಬ್ರಾಡ್‌ಬ್ಯಾಂಡ್‌ ಸೇವೆಗಳು ಗ್ರಾಮೀಣ ಭಾಗದಲ್ಲಿ ಕೂಡ ಚೆನ್ನಾಗಿ ಇರುವುದಕ್ಕೆ ಗುತ್ತಿಗೆ ನೌಕರರ ಸೇವೆಯೂ ಕಾರಣ. ಈ ನಡುವೆ 15-20 ವರ್ಷ ಸೇವೆ ಸಲ್ಲಿಸಿದ ಇವರ ಸೇವೆಗೆ ಕತ್ತರಿ ಹಾಕಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತಗೊಂಡಿದೆ.

Advertisement

ಯಾಕೆ ಕ್ರಮ?
ವೆಚ್ಚ ನಿಯಂತ್ರಣ, ನಷ್ಟ ಸರಿದೂಗಲು ಈ ನಿರ್ಧಾರ ಅನಿವಾರ್ಯ. ಸಂಸ್ಥೆ ದೇಶವ್ಯಾಪಿ ಹೊಂದಿರುವ ಸ್ಥಿರ ದೂರವಾಣಿ ಸಂಪರ್ಕಕ್ಕೆ ಅನುಗುಣವಾಗಿ ಸರಾಸರಿ ವಾರ್ಷಿಕ ಗಳಿಕೆ ಹಾಗೂ ನಿರ್ವಹಣೆಯಲ್ಲಿ ನಷ್ಟ ಆಗುತ್ತಿದೆ. ಸಂಸ್ಥೆಯ ಆದಾಯದ ದೃಷ್ಟಿಯಿಂದ ಈಗಾಗಲೇ ಗುತ್ತಿಗೆ ಸಿಬಂದಿ ಪ್ರಮಾಣ ಸಂಸ್ಥೆಯಲ್ಲಿ ಹೆಚ್ಚಿದೆ. ಪ್ರತಿ ಮಾಸಿಕ ಅಂತ್ಯಕ್ಕೆ ವೇತನ ಪಾವತಿಗೆ ಕಾರ್ಪೊರೇಟ್‌ ಕಚೇರಿಯಿಂದ ಹಣ ಬಿಡುಗಡೆಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ವೆಚ್ಚ ನಿಯಂತ್ರಣಕ್ಕೆ ಈ ನಿರ್ಧಾರ ಅನಿವಾರ್ಯ ಎಂಬುದು ಸಂಸ್ಥೆಯ ಸ್ಪಷ್ಟನೆ. 

ಕೇಂದ್ರೀಯ ಸೂಚನೆ
ಮಂಗಳೂರು ಟೆಲಿಕಾಂ ವೃತ್ತಕ್ಕೆ ಸೀಮಿತ ಪ್ರಕ್ರಿಯೆ ಇದಲ್ಲ. ವರ್ಷದ ಹಿಂದಿನಿಂದಲೇ ಸಿಬಂದಿ ಕಡಿತದ ಪ್ರಸ್ತಾವ ಇತ್ತು. ಕೇಂದ್ರೀಯ ಕಾರ್ಪೊರೇಟ್‌ ಕಚೇರಿಯ ಸೂಚನೆಯಂತೆ ಈಗ ಸಿಬಂದಿ ಆದೇಶ ಬಂದಿದೆ. ಈ ಕುರಿತು ಪರಾಮರ್ಶಿಸಿ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ.
– ರವಿ ಜಿ.ಆರ್‌., ಜನರಲ್‌ ಮ್ಯಾನೇಜರ್‌, ಬಿಎಸ್‌ಎನ್‌ಎಲ್‌ ಮಂಗಳೂರು

ಬೇರೆ ದಾರಿ ಇಲ್ಲ
ಪ್ರಧಾನಿ, ರಾಷ್ಟ್ರಪತಿ, ಸಚಿವ, ಸಂಸದ, ಶಾಸಕ ಸಹಿತ ಎಲ್ಲರಿಗೂ ಕಳೆದ ಹತ್ತಾರು ವರ್ಷಗಳಿಂದ ನಮ್ಮ ಸೇವೆಯನ್ನು ಖಾಯಂಗೊಳಿಸಿ, ಮೂಲ ಹಕ್ಕು ಒದಗಿಸುವಂತೆ ಹಲವು ಬಾರಿ ಮನವಿ ಮಾಡಿ ಒತ್ತಾಯಿಸಿದ್ದೇವೆ, ಕೇಂದ್ರ ಕಾರ್ಮಿಕ ಆಯುಕ್ತರ ಮೂಲಕ ದಾವೆ ಹೂಡಿದ್ದೇವೆ. ಆದರೆ ಇನ್ನೂ ಉದ್ಯೋಗಕ್ಕೆ ಭದ್ರತೆ ಸಿಕ್ಕಿಲ್ಲ. ಈಗ ಇದ್ದ ಉದ್ಯೋಗವನ್ನು ಕಳಕೊಂಡಿದ್ದೇವೆ. ಚುನಾವಣೆಯಲ್ಲಿ ಭಾಗವಹಿಸದಿರುವ ಸಾಮೂಹಿಕ ನಿರ್ಧಾರಕ್ಕೆ ಬಂದಿದ್ದೇವೆ.
– ಮೋಹನ ಉಡುಪಿ, ಕಾರ್ಮಿಕ ಮುಖಂಡ

ನಿರ್ಧಾರಕ್ಕೆ  ಬದ್ಧ
ನಮ್ಮ ಕಚೇರಿಯಲ್ಲಿ ಇಬ್ಬರು ಸುದೀರ್ಘ‌ ಕಾಲದಿಂದ ಸೇವೆ ಸಲ್ಲಿಸುತ್ತಿದ್ದೆವು. ಎ. 1ರಿಂದ ಒಬ್ಬರು ಕೆಲಸಕ್ಕೆ ಬರದಂತೆ ನಮ್ಮ ವಿಭಾಗದ ಅಧಿಕಾರಿಗಳು ಸೂಚಿಸಿದ್ದಾರೆ. ನಾವಿಬ್ಬರೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದೇವೆ. ನ್ಯಾಯಕ್ಕಾಗಿ ಆಗ್ರಹಿಸಿ ಈ ಬಾರಿ ಮತದ ಹಕ್ಕನ್ನು ಚಲಾಯಿಸದೆ ಇರಲು ಎಲ್ಲ ಕಾರ್ಮಿಕರು ನಿರ್ಧರಿಸಿದ್ದು, ನಾನು ನನ್ನ ಕುಟುಂಬ ಅದಕ್ಕೆ ಬದ್ಧರಿದ್ದೇವೆ.
– ಚಂದ್ರಶೇಖರ ಕಾಣಿಯೂರು, ಬಿಎಸ್‌ಎನ್‌ಎಲ್‌ ಗುತ್ತಿಗೆ ಕಾರ್ಮಿಕ

— ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next