Advertisement

ಬಿಎಸ್ಸೆನ್ನೆಲ್‌ ಕೇಂದ್ರ, ಮೊಬೈಲ್‌ ಟವರ್‌ಗಳು ಸ್ತಬ್ಧ

02:53 PM Mar 27, 2019 | Naveen |
ಈಶ್ವರಮಂಗಲ : ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ವಿನಿಮಯ ಕೇಂದ್ರಗಳು, ಮೊಬೈಲ್‌ ಟವರ್‌ಗಳು ವಿದ್ಯುತ್‌ ಸಮಸ್ಯೆ ಮತ್ತು ಡೀಸೆಲ್‌ ಪೊರೈಕೆ ಇಲ್ಲದೆ ಸಮರ್ಪಕ ಸೇವೆಯನ್ನು ನೀಡುತ್ತಿಲ್ಲ. ಹಲವು ತಿಂಗಳಿನಿಂದ ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ಪಾಣಾಜೆ ಮತ್ತು ಈಶ್ವರಮಂಗಲ ವಿನಿಮಯ ಕೇಂದ್ರಗಳ ಬಳಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಮೇಲಧಿಕಾರಿಗಳಿಗೆ ವಿಷಯ ತಿಳಿದಿದ್ದರೂ ಅವ್ಯವಸ್ಥೆಯ ಬಗ್ಗೆ ಸುಮ್ಮನೆ ಕುಳಿತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಪಾಣಾಜೆ ಮತ್ತು ಈಶ್ವರಮಂಗಲ ಪ್ರದೇಶದಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಹಾದು ಹೋಗುತ್ತಿದ್ದು, ಪ್ರತಿದಿನ ಹಲವರು ಬಸ್‌ ಹಾಗೂ ಇತರ ವಾಹನಗಳ ಮೂಲಕ ಈ ದಾರಿಯಲ್ಲಿ ಸಾಗುತ್ತಾರೆ. ಶಿಕ್ಷಣ ಕೇಂದ್ರ, ಬ್ಯಾಂಕ್‌ಗಳು ಹಾಗೂ ಇತರ ಸಂಘ ಸಂಸ್ಥೆಗಳು, ವಾಹನ ಚಾಲಕರು ಬಿಎಸ್ಸೆನ್ನೆಲ್‌ ಸಂಪರ್ಕ ಹೊಂದಿದ್ದಾರೆ. ಅವರೆಲ್ಲರಿಗೂ ನೆಟ್‌ವರ್ಕ್‌ ಸಮಸ್ಯೆ ದಿನೇ ದಿನೇ ಕಾಡುತ್ತಲಿದೆ.
ವಿದ್ಯುತ್‌ ಹೋದರೆ ಸಿಗ್ನಲ್ಲೂ ಮಾಯ
ವಿದ್ಯುತ್‌ ಇದ್ದರೆ ಮಾತ್ರ ಸಿಗ್ನಲ್‌ ಇರುತ್ತದೆ. ಕೆಲವು ತಿಂಗಳಿನಿಂದ ವಿದ್ಯುತ್‌ ಕಡಿತದ ಸಮಸ್ಯೆ ಹೆಚ್ಚಾಗಿರುವ ಕಾರಣ ಟವರ್‌ಗಳು, ವಿನಿಮಯ ಕೇಂದ್ರಗಳು ಸ್ತಬ್ಧಗೊಂಡಿದೆ. ವಿದ್ಯುತ್‌, ಸಮರ್ಪಕ ಡೀಸೆಲ್‌ ಪೂರೈಕೆಯಾಗದೆ ಇರುವುದರಿಂದ ವಿನಿಮಯ ಕೇಂದ್ರದ ಸಿಬಂದಿಯನ್ನು ಬಳಕೆ ದಾರರು ತರಾಟೆಗೆ ತೆಗೆದುಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗುತ್ತಿದೆ.
ಬಳಕೆದಾರರು ಕ್ಷೀಣಿಸುತ್ತಿದ್ದಾರೆ
ಸೇವಾ ಶುಲ್ಕಗಳಲ್ಲಿ ಖಾಸಗಿ ಕಂಪೆನಿಗಳಿಗೆ ಹೋಲಿಸಿ ದರೆ ಬಿಎಸ್ಸೆನ್ನೆಲ್‌ ನಲ್ಲಿ ತೀರಾ ಕಡಿಮೆ ಇದ್ದರೂ ಅಸಮರ್ಪಕ ನೆಟ್‌ವರ್ಕ್‌ನಿಂ ದಾಗಿ ಬಹುತೇಕ ಜನರು ತಮ್ಮ ಸಿಮ್‌ ಕಾರ್ಡ್‌ ಅನ್ನು ಇತರ ಖಾಸಗಿ ನೆಟ್‌ವರ್ಕ್‌ಗೆ ಬದಲಾಯಿಸುತ್ತಿದ್ದಾರೆ. ಗಡಿಭಾಗದ ವಿನಿಮಯ ಕೇಂದ್ರದಲ್ಲಿ ಮೂರು ವರ್ಷದ ಹಿಂದೆ ಬಳಕೆದಾರರು ಹೆಚ್ಚಿದ್ದರು. ಈಗ ಕಡಿಮೆಯಾಗಿದ್ದಾರೆ.
ಗ್ರಾಹಕರಿಗೆ ವಿಪರೀತ ತೊಂದರೆ
ಆರು ತಿಂಗಳಿನಿಂದ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಸಮಸ್ಯೆ ಇದೆ. ಇದನ್ನು ನಂಬಿದ ಗ್ರಾಹಕರು ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್‌ ಇದ್ದರೆ ಮಾತ್ರ ನೆಟ್‌ ವರ್ಕ್‌ ಇರುತ್ತದೆ. ಕರೆ ಮಾಡಲು ಸಾಧ್ಯವಾಗುತ್ತದೆ.ನಿರಂತರವಾಗಿ ನೆಟ್‌ವರ್ಕ್‌ ಸಿಗುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ಉತ್ತಮ ಸೇವೆ ಸಿಗುವಂತೆ ಮಾಡಬೇಕು.
 - ರವೀಂದ್ರ ಭಂಡಾರಿ,
    ನಿರ್ದೇಶಕರು, ಪಾಣಾಜೆ ಸಿಎ
    ಬ್ಯಾಂಕ್‌ರ್‌.
 ಸಮಸ್ಯೆಯಾಗಿದೆ, ಸರಿಯಾಗುತ್ತದೆ
ವಿದ್ಯುತ್‌ ಸಮಸ್ಯೆಯಿಂದಗಡಿಭಾಗ ಮತ್ತು ಉಳಿದ ಕಡೆ ಬಿಎಸ್ಸೆನ್ನೆಲ್‌ ವಿನಿಮಯ ಕೇಂದ್ರ ಸಮರ್ಪಕ ವಾಗಿ ಕೆಲಸ ಮಾಡುತ್ತಿಲ್ಲ. ಡೀಸೆಲ್‌ನ ಪೂರೈಕೆ ಸರಿಯಾಗಿಲ್ಲ. ವರ್ಷಾಂತ್ಯದ ತಿಂಗಳು ಆಗಿರುವುದರಿಂದ ಸಮಸ್ಯೆಯಾಗಿದೆ. ಮುಂದಿನ ತಿಂಗಳಲ್ಲಿ ಎಲ್ಲವೂ ಸರಿಯಾಗಬಹುದು.
 - ಸುಬ್ಬಣ್ಣ ನಾಯ್ಕ,
ಉಪ ಮಂಡಲಾಧಿಕಾರಿ,
ಬಿಎಸ್ಸೆನ್ನೆಲ್‌, ಪುತ್ತೂರು
ಮಾಧವ ನಾಯಕ್‌ ಕೆ.
Advertisement

Udayavani is now on Telegram. Click here to join our channel and stay updated with the latest news.

Next