ಮೈಸೂರು: ಬಿಜೆಪಿ ನಡಿಗೆ- ದಲಿತರ ಕಡೆಗೆ ಜನ ಸಂಪರ್ಕ ಅಭಿಯಾನ ಕೈಗೊಂಡಿರುವ ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಭಾನುವಾರ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ದಲಿತ ಮುಖಂಡ ನರಸಿಂಹಮೂರ್ತಿ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು.
ರಾಜೇಂದ್ರನಗರ ಕುರಿಮಂಡಿ ಎರಡನೇ ಕ್ರಾಸ್‌ನಲ್ಲಿರುವ ನರಸಿಂಹಮೂರ್ತಿ ಮನೆಯಲ್ಲಿ ಉಪಾಹಾರ ನಿಗದಿಯಾಗಿತ್ತು. ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಯಡಿಯೂರಪ್ಪ, ಪಕ್ಷದ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ,
-ನಿವೃತ್ತ ಐಎಎಸ್ ಅಧಿಕಾರಿ ಶಿವರಾಮ್ ಅವರೊಂದಿಗೆ ನರಸಿಂಹಮೂರ್ತಿ ಅವರ ಪತ್ನಿ ರೇಣುಕಾ ಸಿದ್ಧಪಡಿಸಿದ್ದ ಅವರೆಕಾಳು ಉಪ್ಪಿಟ್ಟು, ಉಚ್ಚೆಳ್ಳು ಚಟ್ನಿ ಜತೆಗೆ ರಾಗಿರೊಟ್ಟಿ ಸೇವಿಸಿದರು. ಮನೆಯು ಚಿಕ್ಕದಾಗಿದ್ದರಿಂದ ಕೆಲವರಷ್ಟೇ ಒಳಗೆ ಉಪಾಹಾರ ಮಾಡಿದರೆ, ಉಳಿದವರು ರಸ್ತೆಯಲ್ಲಿ ಹಾಕಿದ್ದ ಶಾಮಿಯಾನದಲ್ಲಿ ನಿಂತು ಸೇವಿಸಿದರು.
ಅದ್ಧೂರಿ ಸ್ವಾಗತ: ಅಲ್ಪಸಂಖ್ಯಾತರು, ದಲಿತರೇ ಹೆಚ್ಚಾಗಿರುವ ಕುರಿಮಂಡಿಯಲ್ಲಿ ಯಡಿಯೂರಪ್ಪ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಮುಖ್ಯಬೀದಿಯಿಂದ ಎರಡನೇ ಕ್ರಾಸ್‌ಗೆ ಬರುತ್ತಿದ್ದಂತೆ ಕೆಲ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಬೆಳಗ್ಗೆಯಿಂದ ಕಾದು ನಿಂತಿದ್ದ ಬಡಾವಣೆಯ ಯುವಕರು ಪಟಾಕಿ ಸಿಡಿಸಿ ಜೈಕಾರ ಕೂಗಿದರು.
ಮಹಿಳೆಯರು ಯಡಿಯೂರಪ್ಪರನ್ನು ನೋಡಲು ಮುಗಿಬಿದ್ದರಲ್ಲದೆ, ಕೆಲ ಯುವಕರು ಹಾಗೂ ಮಹಿಳೆಯರು ಮೋದಿ ಅವರ ಮುಖವಾಡ ಧರಿಸಿ ಸೆಲ್ಫಿ ತೆಗೆದುಕೊಂಡರೇ, ಇನ್ನೂ ಕೆಲವು ಹೆಣ್ಣು ಮಕ್ಕಳು ಯಡಿಯೂರಪ್ಪರ ಜತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಯಡಿಯೂರಪ್ಪ ಅವರು ನಮ್ಮ ಮನೆಯಲ್ಲಿ ತಿಂಡಿ ತಿಂದಿದ್ದು ಖುಷಿಯಾಗಿದೆ. ಅವರಿಗೆ ಇಷ್ಟವಾಗಿದ್ದನ್ನು ಮಾಡಿ ಬಡಿಸಿದೆ. ನಮ್ಮಂಥ ಬಡವರ ಮನೆಯಲ್ಲಿ ಉಪಹಾರ ಸೇವಿಸಿದ್ದಕ್ಕಿಂತ ಇನ್ನೇನು ಬೇಕು. ಇವತ್ತು ನಮ್ಮ ಚಿಕ್ಕಮ್ಮನ ಮಗಳ ಮದುವೆ ಇತ್ತು. ಆ ಸಂಭ್ರಮಕ್ಕಿಂತ ನಮಗೆ ಇದೇ ದೊಡ್ಡದು.
-ರೇಣುಕಾ, ನರಸಿಂಹಮೂರ್ತಿ ಪತ್ನಿ
ಮನೆಯಲ್ಲಿ ನನ್ನ ಪತ್ನಿಯೇ 10 ಜನರಿಗೆ ಉಪಹಾರ ಸಿದ್ಧ ಮಾಡಿದ್ದರು. ಉಳಿದವರಿಗೆ ನನ್ನ ಖರ್ಚಿನಲ್ಲೇ ನಮ್ಮ ಸಮುದಾಯದ ಭಟ್ಟರಿಂದಲೇ ಐನೂರು ಜನರಿಗೆ ಇಡ್ಲಿ, ಉಪ್ಪಿಟ್ಟು ಮಾಡಿಸಿದ್ದೆವು.
-ನರಸಿಂಹ ಮೂರ್ತಿ, ದಲಿತ ಮುಖಂಡ