ಜಮ್ಮು : ಜಮ್ಮುವಿನ ಸಾಂಬಾ ಜಿಲ್ಲೆಯ 97 ಬೆಟಾಲಿಯನ್ ನ ಬಿಎಸ್ಎಫ್ ಹೆಡ್ ಕಾನ್ಸ್ಟೆಬಲ್ ನೀಲಂ ಕುಮಾರ್ ಎಂಬಾತ ತನ್ನ ಮೂರನೇ ಪತ್ನಿ ರಿತು ದೇವಿ ಎಂಬಾಕೆಯನ್ನು ಕೊಂದು, ಬಳಿಕ ಆಕೆಗೆ ಬೆಂಕಿ ಹಚ್ಚಿರುವ ಘಟನೆ ಕಥುವಾ ಜಿಲ್ಲೆಯ ಶೇಷವಾನ್ನಲ್ಲಿನ ಛದ್ವಾಲ್ ಎಂಬಲ್ಲಿಂದ ವರದಿಯಾಗಿದೆ.
ಪತ್ನಿ ರಿತು ದೇವಿಯನ್ನು ಕೊಂದು ಬೆಂಕಿ ಹಚ್ಚಿದ ಬಳಿಕ ನೀಲಂ ಕುಮಾರ್, ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀಲಂ ಕುಮಾರ್ ನ ಮೃತ ದೇಹ, ರೈಲಿನ ಹಳಿಯ ಮೇಲೆ ಪತ್ತೆಯಾಗಿದೆಯಾದರೆ ಆತನ ಪತ್ನಿಯ ಅರೆ ಸುಟ್ಟ ಮೃತದೇಹ ಆಕೆಯ ಮನೆ ಸಮೀಪ ಪತ್ತೆಯಾಗಿದೆ.
ನೀಲಂ ಕುಮಾರನ ಇನ್ನೋರ್ವ ಪತ್ನಿ ಜಮ್ಮುವಿನ ಬಕ್ಷಿ ನಗರದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ನೀಲಂ ಕುಮಾರ್ ನ ಮೊದಲ ಪತ್ನಿ 20 ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆ. ಆಕೆಯನ್ನು ನೀಲಂ ಕುಮಾರನ ಹಿರಿಯ ಸಹೋದರನೇ ಕೊಂದಿದ್ದು ಆ ಕೃತ್ಯದ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನೀಲಂ ಕುಮಾರ್ ಮತ್ತು ರಿತು ಕಳೆದ 7 – 8 ವರ್ಷಗಳಿಂದ ಜತೆಯಾಗಿ ವಾಸಿಸುತ್ತಿದ್ದರು.