ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ, ಜಾನುವಾರುಗಳ ಕಳ್ಳತನ, ಮಾದಕವಸ್ತುಗಳ ಕಳ್ಳಸಾಗಣೆಗಳ ಕಡಿವಾಣಕ್ಕೆ ಭಾರತೀಯ ಗಡಿ ಭದ್ರತಾಪಡೆ (ಬಿಎಸ್‌ಎಫ್) ಹೊಸ ಯೋಜನೆ ರೂಪಿಸಿದ್ದು, ಗಡಿಬೇಲಿಗಳಲ್ಲಿ ಜೇನುಸಾಕಾಣಿಕೆಗೆ ಮುಂದಾಗಿದೆ. ಇತ್ತೀಚೆಗಷ್ಟೇ ನಾದಿಯಾ ಜಿಲ್ಲೆಯ ಗಡಿಭಾಗದಲ್ಲಿ ಈ ಪ್ರಯೋಗವನ್ನು ಬಿಎಸ್‌ಎಫ್ನ 32ನೇ ಬೆಟಾಲಿಯನ್ ಕೈಗೊಂಡಿತ್ತು. ಇದೀಗ ಪಶ್ಚಿಮ ಬಂಗಾಳದ ಜತೆಗೆ ಹಂಚಿಕೊಂಡಿರುವ ಸಂಪೂರ್ಣ 2,217 ಕಿ.ಮೀ.ಗಡಿ ಭಾಗದಲ್ಲೂ ಇದೇ ಕ್ರಮ ಅನುಸರಿಸಲು ಯೋಜಿಸಲಾಗಿದೆ. ಕೇಂದ್ರಸರ್ಕಾರ ಆಯುಷ್ ಸಚಿವಾಲಯ ಈ ಸಂಬಂಧಿಸಿದಂತೆ ಬಿಎಸ್‌ಎಫ್ ಜೊತೆಗೆ ಕೈಜೋಡಿಸಿದ್ದು “ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್’ ಅನ್ವಯ ಔಷಧಿಗುಣವುಳ್ಳ ಗಿಡಗಳನ್ನು ಬಿಎಸ್‌ಎಫ್ಗೆ ನೀಡಿದೆ. ಅವುಗಳನ್ನು ಗಡಿ ಬೇಲಿಗಳ ಪಕ್ಕ ನೆಟ್ಟು, ಬೇಲಿಗಳಿಗೆ ಜೇನು ಪೆಟ್ಟಿಗಗಳನ್ನ ಅಳವಡಿಸಲಾಗುತ್ತದೆ. ಗಡಿ ಪ್ರದೇಶದ ಸ್ಥಳೀಯ ಜೇನು ಸಾಕಣೆಗಾರರಿಗೆ ಲಭ್ಯವಾಗುವಂತೆ ಬಿಎಸ್‌ಎಫ್ ನೋಡಿಕೊಳ್ಳಲಿದೆ. ಈ ಮೂಲಕ ಗಡಿ ಬೇಲಿಗಳಲ್ಲಿ ಜೇನು ಸಾಕಾಣಿಕೆಯೂ ಆಗುತ್ತದೆ. ಜತೆಗೆ ಗಡಿ ನುಸುಳುವಿಕೆಯಂಥ ಅಪರಾಧಗಳಿಗೂ ಕಡಿವಾಣ ಬೀಳಲಿದೆ ಎಂದು ಬಿಎಸ್‌ಎಫ್ ಹೇಳಿದೆ.