ಮುಂಬಯಿ : ಅತ್ಯಾಶ್ಚರ್ಯದ ರಾಲಿಯೊಂದರಲ್ಲಿ ಇಂದು ಸೋಮವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 611 ಅಂಕಗಳ ಭರ್ಜರಿ ಜಿಗಿತವನ್ನು ದಾಖಲಿಸಿ 33,917.94 ಅಂಕಗಳ ಮಟ್ಟಕ್ಕೆ ಏರಿತು.
2016ರ ಮಾರ್ಚ್ ಬಳಿಕದಲ್ಲಿ ಸೆನ್ಸೆಕ್ಸ್ ಒಂದೇ ದಿನ ಸಾಧಿಸಿರುವ ಬೃಹತ್ ಜಿಗಿತ ಇಂದಿನದ್ದಾಗಿದೆ. ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆಯನ್ನು ಕಾಣುತ್ತಿರುವ ಪರಿಣಾಮವಾಗಿ ಜಾಗತಿಕ ಶೇರು ಮಾರುಕಟ್ಟೆಗಳು ಇಂದು ಬಹುವಾಗಿ ಚಿಗುರಿಕೊಂಡವು. ಅಂತೆಯೇ ಮುಂಬಯಿ ಶೇರು ಮಾರುಕಟ್ಟೆಯಲ್ಲೂ ಭರ್ಜರಿ ತೇಜಿ ಕಂಡು ಬಂತು.
ವಿದೇಶಿ ಬಂಡವಾಳ ಭಾರತೀಯ ಶೇರು ಮಾರುಕಟ್ಟೆಯತ್ತ ಧಾರಳವಾಗಿ ಹರಿದು ಬರುತ್ತಿರುವುದು ಕೂಡ ಇಂದಿನ ತೇಜಿಗೆ ಕಾರಣವಾಯಿತು. ಮೆಟಲ್, ಆಯಿಲ್ ಆ್ಯಂಡ್ ಗ್ಯಾಸ್, ಎಫ್ ಎಂ ಸಿ ಜಿ, ಬ್ಯಾಂಕಿಂಗ್, ಪವರ್, ಇನ್‌ಫ್ರಾಸ್ಟ್ರಕ್ಚರ್, ಐಟಿ, ಆಟೋ ಮತ್ತು ಕ್ಯಾಪಿಟಲ್ ಗೂಡ್ಸ್ ಶೇರುಗಳು ಇಂದಿನ ಜಿಗಿತದಲ್ಲಿ ಮುಖ್ಯ ಪಾತ್ರ ವಹಿಸಿದವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದಿನ ವಹಿವಾಟನ್ನು 194.55 ಅಂಕಗಳ ಉತ್ತಮ ಜಿಗಿತದೊಂದಿಗೆ 10,421.40 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇಂದು ಸಂಜೆ ಪ್ರಕಟಗೊಳ್ಳಲಿರುವ ಹಣದುಬ್ಬರ ಮತ್ತು ಕೈಗಾರಿಕಾ ಅಂಕಿ ಅಂಶಗಳು ಆಶಾದಾಯಕವಾಗಿ ಇರುವವೆಂಬ ನಿರೀಕ್ಷೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಮುನ್ನಡೆ ಸಾಧಿಸಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಶುಕ್ರವಾರ ವಿದೇಶಿ ಹೂಡಿಕೆದಾರರು ಇಂದು 550.36 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದ್ದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು 65 ಕೋಟಿ ರೂ. ಮೌಲ್ಯದ ಶೇರು ಖರೀದಿ ಮಾಡಿದ್ದರು.