ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇದೇ ಮೊದಲ ಬಾರಿಗೆ 38,000 ಅಂಕಗಳ ಐತಿಹಾಸಿಕ ಮಟ್ಟದಲ್ಲಿ ಇಂದು ಗುರುವಾರದ ವಹಿವಾಟನ್ನು ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು ಹೊಸ ಸಾರ್ವಕಾಲಿಕ ದಾಖಲೆಯ ಎತ್ತರದಲ್ಲಿ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು.
ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 136.81 ಅಂಕಗಳ ಏರಿಕೆಯೊಂದಿಗೆ 38,024.37 ಅಂಕಗಳ ಮಟ್ಟದಲ್ಲೂ, ನಿಫ್ಟಿ 20.70 ಅಂಕಗಳ ಏರಿಕೆಯೊಂದಿಗೆ 11,470.70 ಅಂಕಗಳ ಮಟ್ಟದಲ್ಲೂ ಸ್ಥಿತವಾಗಿದ್ದವು.
ಕಳೆದ ಜು.26ರಂದು 37,000 ಮಟ್ಟದಲ್ಲಿದ್ದ ಸೆನ್ಸೆಕ್ಸ್‌ಗೆ 38,000 ಅಂಕಗಳ ಐತಿಹಾಸಿಕ ಗಡಿ ದಾಟಲು ಕೇವಲು 11 ದಿನಗಳ ವಹಿವಾಟು ಸಾಕಾಯಿತು.
ಐಸಿಐಸಿಐ ಬ್ಯಾಂಕ್ ಇಂದು ಶೇ.4.64 ರಷ್ಟು ಏರಿ ಟಾಪ್ ಗೇನರ್ ಎನಿಸಿಕೊಂಡಿತು. ಇದೇ ರೀತಿ ಎಕ್ಸಿಸ್ ಬ್ಯಾಂಕ್ ಶೇ.3.86 ಮತ್ತು ಎಸ್‌ಬಿಐ ಶೇ.2.53ರ ಏರಿಕೆಯನ್ನು ಕಂಡವು.
ಕಾರ್ಪೊರೇಟ್ ತ್ತೈಮಾಸಿಕ ಫಲಿತಾಂಶ ಚೆನ್ನಾಗಿರುವುದು ಮತ್ತು ಶೇರು ಮಾರುಕಟ್ಟೆಗೆ ದೇಶೀಯ ಮತ್ತು ವಿದೇಶಿ ಸಂಸ್ಥೆಗಳ ಬಂಡವಾಳ ಹರಿದು ಬರುತ್ತಿರುವುದು ಶೇರು ಮಾರುಕಟ್ಟೆಯಲ್ಲಿನ ತೇಜಿಗೆ ಕಾರಣವಾಗಿದೆ.
ಮುಂಬಯಿ ಶೇರು ಮಾರುಕಟ್ಟೆಯಲ್ಲಿಂದು ಒಟ್ಟು 2,828 ಶೇರುಗಳು ವಹಿವಾಟಿಗೆ ಒಳಪಟ್ಟವು; 1,346 ಶೇರುಗಳು ಮುನ್ನಡೆ ಕಂಡವು; 1,345 ಶೇರುಗಳು ಹಿನ್ನಡೆಗೆ ಗುರಿಯಾದವು; 137 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.