ಮುಂಬಯಿ : ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 201.97 ಅಂಕಗಳ ಜಿಗಿತವನ್ನು ಸಾಧಿಸಿ ಹೊಸ ದಾಖಲೆಯ ಎತ್ತರವಾಗಿ 36,928.06 ಅಂಕಗಳ ಮಟ್ಟವನ್ನು ತಲುಪಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಅನಂತರ ಕುಸಿತವನ್ನು ಕಂಡು 11.30ರ ಹೊತ್ತಿಗೆ ಮತ್ತೆ ಚೇತರಿಸಿ 19.44 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.40 ಅಂಕಗಳ ಕುಸಿತವನ್ನು ಕಂಡು 11,123.90 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಏಶ್ಯನ್ ಪೇಂಟ್, ಬಜಾಜ್ ಫಿನಾನ್ಸ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಶೇರುಗಳು ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಬಜಾಜ್ ಫಿನ್‌ಸರ್ವ್, ಎಸ್ ಬ್ಯಾಂಕ್, ಅದಾನಿ ಪೋರ್ಟ್, ಭಾರ್ತಿ ಇನ್‌ಫ್ರಾಟೆಲ್, ಬಜಾಜ್ ಆಟೋ; ಟಾಪ್ ಲೂಸರ್‌ಗಳು : ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಅಲ್‌ಟ್ರಾ ಟೆಕ್ ಸಿಮೆಂಟ್, ಗ್ರಾಸಿಂ, ಎಚ್ ಪಿ ಸಿ ಎಲ್.
ಜುಲೈ ತಿಂಗಳ ವಾಯಿದೆ ವಹಿವಾಟು ನಾಳೆ ಗುರುವಾರ ಚುಕ್ತಾ ಆಗಲಿರುವ ಕಾರಣ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರುತ್ತಿರುವುದರಿಂದ ಶೇರು ಪೇಟೆಯಲ್ಲಿ ವಿಪರೀತ ಏರಿಳಿತಗಳು ಕಂಡು ಬರುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಕಳೆದ ಮೂರು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ 473.87 ಅಂಕಗಳನ್ನು ಸಂಪಾದಿಸಿತ್ತು.