ಮುಂಬಯಿ : ಏಶ್ಯನ್ ಮಾರುಕಟ್ಟೆಗಳಲ್ಲಿನ ದೌರ್ಬಲ್ಯವನ್ನು ಅನುಸರಿಸಿ ಹೆಜ್ಜೆ ಇಟ್ಟ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ಕುಸಿತಕ್ಕೆ ಗುರಿಯಾಯಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಜಾರಿತು.
ಮೆಟಲ್, ಹೆಲ್ತ್ ಕೇರ್, ಟೆಕ್, ಐಟಿ ಮತ್ತು ರಿಯಲ್ಟಿ ಶೇರುಗಳು ಇಂದು ಆರಂಭಿಕ ವಹಿವಾಟಿನಲ್ಲಿ ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು. ನಿನ್ನೆ ಸೋಮವಾರ ಸೆನ್ಸೆಕ್ಸ್ 286.68 ಅಂಕಗಳ ಏರಿಕೆಯನ್ನು ಸಾಧಿಸಿತ್ತು.
ಬೆಳಗ್ಗೆ 11.40ರ ಹೊತ್ತಿಗೆ ಸೆನ್ಸೆಕ್ಸ್ 56.83 ಅಂಕಗಳ ನಷ್ಟದೊಂದಿಗೆ 33,198.53 ಅಂಕಗಳ ಮಟ್ಟದಲ್ಲೂ ನಿಫ್ಟಿ 20.40 ಅಂಕಗಳ ನಷ್ಟದೊಂದಿಗೆ 10,191.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಟಾಟಾ ಸ್ಟೀಲ್, ಎಸ್‌ಬಿಐ, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. ಒಟ್ಟು 2,394 ಕಂಪೆನಿಯ ಶೇರುಗಳು ವ್ಯವಹಾರಕ್ಕೆ ಒಳಪಟ್ಟಿದ್ದವು; 1,235 ಶೇರುಗಳು ಮುನ್ನಡೆ ಸಾಧಿಸಿದವು; 1,064 ಶೇರುಗಳು ಹಿನ್ನಡೆಗೆ ಗುರಿಯಾದವು; 95 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದು ಡಾಲರ್ ಎದುರು ರೂಪಾಯಿ 9 ಪೈಸೆಯಷ್ಟು ಚೇತರಿಸಿಕೊಂಡು 65.09 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.