ಮುಂಬಯಿ : ಡಾಲರ್ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ ಐತಿಹಾಸಿಕ ತಳ ಮಟ್ಟವಾಗಿ 72.67 ರೂ. ಮಟ್ಟಕ್ಕೆ ಕುಸಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 468 ಅಂಕಗಳ ಭಾರೀ ನಷ್ಟದೊಂದಿಗೆ 37,922.17 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
2018ರಲ್ಲಿ ಈ ತನಕ ರೂಪಾಯಿ ವಿನಿಮಯ ಮೌಲ್ಯ ಶೇ.13ರಷ್ಟು ನಷ್ಟವಾಗಿದೆ. ಇಂದು ರೂಪಾಯಿ 72.67ರ ಮಟ್ಟಕ್ಕೆ ಕುಸಿದ ತತ್‌ಕ್ಷಣ ಆರ್ ಬಿ ಐ ಮಧ್ಯಪ್ರವೇಶಿಸಿತು. ಪರಿಣಾಮವಾಗಿ ರೂಪಾಯಿ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಂಡಿತು.
ಈ ವರ್ಷ ಮಾರ್ಚ್ 16ರಂದು 509.54 ಅಂಕಗಳ ನಷ್ಟಕ್ಕೆ ಗುರಿಯಾದ ನಂತರದಲ್ಲಿ ಸೆನ್ಸೆಕ್ಸ್‌ಗೆ ಆಗಿರುವ ಗರಿಷ್ಠ ಏಕದಿನ ನಷ್ಟ ಇಂದಿನದ್ದಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 151 ಅಂಕಗಳ ಕುಸಿಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,438.10 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ತಾರಕಕ್ಕೇರುವ ಭೀತಿಯಲ್ಲಿ ಇಂದು ಜಾಗತಿಕ ಶೇರುಪೇಟೆಗಳು ತೀವ್ರ ಹಿನ್ನಡೆಗೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,927 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,048 ಶೇರುಗಳು ಮುನ್ನಡೆ ಕಂಡವು; 1,684 ಶೇರುಗಳು ಹಿನ್ನಡೆಗೆ ಗುರಿಯಾದವು; 195 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.