ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ಹಣಕಾಸು ನೀತಿ ಪರಾಮರ್ಶೆಯ ಫಲಿತಾಂಶದೊಂದಿಗೆ ಬಡ್ಡಿ ದರ ಕುರಿತಾದ ತನ್ನ ನಿರ್ಧಾರವನ್ನು ಪ್ರಕಟಿಸಲಿದ್ದು ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆ ನಡೆ ತೋರಿ ಬಡ್ಡಿ ಸೂಕ್ಷ್ಮ ಸಂವೇದಿ ಶೇರುಗಳನ್ನು ಮಾರಲು ತೊಡಗಿದ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ತನ್ನ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ತನ್ನ ದೌರ್ಬಲ್ಯ ಪ್ರಕಟಿಸಿರುವುದು ಕೂಡ ಇಂದು ಶೇರು ಮಾರುಕಟ್ಟೆಗೆ ವ್ಯತಿರಿಕ್ತವಾಗಿ ಪರಿಣಮಿಸಿತು. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಆಟೋ, ಮೆಟಲ್ ಮತ್ತು ಪಿಎಸ್‌ಯು ಶೇರುಗಳು ಶೇ.1.76ರಷ್ಟು ಕುಸಿದವು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 76.59 ಅಂಕಗಳ ನಷ್ಟದೊಂದಿಗೆ 32,725.85 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32 ಅಂಕಗಳ ನಷ್ಟದೊಂದಿಗೆ 10,086.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಎಚ್ ಡಿ ಎಫ್ ಸಿ, ಎಸ್‌ಬಿಐ, ಇನ್‌ಫೋಸಿಸ್ ಮತ್ತು ವೇದಾಂತ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ 692 ಶೇರುಗಳು ಹಿನ್ನಡೆಗೆ ಗುರಿಯಾದವು; 451 ಶೇರುಗಳು ಮುನ್ನಡೆಯ ಭಾಗ್ಯ ಕಂಡವು.