ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 572.28 ಅಂಕಗಳ ಭಾರೀ ಕುಸಿತದೊಂದಿಗೆ 35,312.13 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 181.75 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,601.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆ ಇಂದು ನಿರಂತರ ಮೂರನೇ ದಿನವಾಗಿ ಕುಸಿತವನ್ನು ಕಂಡಿತು. ಜಾಗತಿಕ ಪೇಟೆಗಳಲ್ಲಿನ ನೇತ್ಯಾತ್ಮಕತೆ, ಡಾಲರ್ ಎದುರು ರೂಪಾಯಿಯ ನಿರಂತರ ಕುಸಿತ, ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಇವೇ ಮೊದಲಾದ ಕಾರಣಕ್ಕೆ ಇಂದು ಮುಂಬಯಿ ಶೇರು ಪೇಟೆ ಕುಸಿಯಿತು.
ಮೆಟಲ್, ಆಯಿಲ್ ಆ್ಯಂಡ್ ಗ್ಯಾಸ್, ಫಾರ್ಮಾ ಮತು ಹಣಕಾಸು ರಂಗ ಸೇರಿದಂತೆ ಬಹುತೇಕ ಎಲ್ಲ ರಂಗದ ಶೇರುಗಳು ಇಂದು ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು 36 ಪೈಸೆಯ ಕುಸಿತವನ್ನು ಕಂಡು 70.82 ರೂ. ಮಟ್ಟಕ್ಕೆ ಜಾರಿತು. ಹಾಗಿದ್ದರೂ ಕಚ್ಚಾ ತೈಲ ಬೆಲೆ ಇಂದು ಕೂಡ ಒಪೆಕ್ ಸಭೆಗಿಂತ ಮುನ್ನವೇ ಕುಸಿತವನ್ನು ದಾಖಲಿಸಿತು. ಬ್ರೆಂಟ್ ಕಚ್ಚಾ ತೈಲ ಬ್ಯಾರಲ್ ಗೆ 59.74 ಡಾಲರ್‌ಗೆ ಇಳಿಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,697ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 740 ಕಂಪೆನಿಗಳು ಮಾತ್ರವೇ ಮುನ್ನಡೆ ಸಾಧಿಸಿದವು; 1,809 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 148 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.