ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಅಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿರುವ ಮುಂಬಯಿ ಶೇರು ಮಾರುಕಟ್ಟೆ ಇಂದು ಮಂಗಳವಾರದ ವಹಿವಾಟನ್ನು 363.79 ಅಂಕಗಳ ನಷ್ಟದೊಂದಿಗೆ 31,710.99 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೆ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 88.80 ಅಂಕಗಳ ನಷ್ಟಕ್ಕೆ ಗುರಿಯಗಿ ದಿನದ ವಹಿವಾಟನ್ನು 9,827.15 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಐಟಿಸಿ ಶೇರು ಶೇ.12ರಷ್ಟು ಕುಸಿದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿತು. ಜಿಎಸ್‌ಟಿ ಮಂಡಳಿ ಸಿಗರೇಟುಗಳ ಮೇಲಿನ ಸುಂಕವನ್ನು ಹೆಚ್ಚಿಸಲು ತೀರ್ಮಾನಿಸಿರುವುದೇ ಎಫ್ಎಂಸಿಜಿ ಕುಸಿತಕ್ಕೆ ಕಾರಣವಾಯಿತು.
ಜಾಗತಿಕವಾಗಿ ಅಮೆರಿಕನ್ ಡಾಲರ್ ಹತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದದ್ದು ಕೂಡ ಶೇರು ಮಾರುಕಟ್ಟೆಯ ತಲ್ಲಣಕ್ಕೆ ಕಾರಣವಾಯಿತು. ಇದರಿಂದಾಗಿ ಅಮೆರಿಕನ್ ಫೆಡ್ ಬ್ಯಾಂಕ್ ಈಗಿನ್ನು ತನ್ನ ಬಡ್ಡಿ ದರ ಏರಿಸುವ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುವುದೆಂದು ಭಾವಿಸಲಾಗಿದೆ.
ಇಂದು 2,878 ಶೇರುಗಳು ವಹಿವಾಟಿಗೆ ಒಳಪಟ್ಟವು; 1,182 ಶೇರುಗಳು ಮುನ್ನಡೆ ಕಂಡರೆ 1,530 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.