ಮುಂಬಯಿ : ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಮೇಲೆ ಮಹತ್ತರ ಪರಿಣಾಮ ಬೀರಬಲ್ಲ ಕರ್ನಾಟಕ ವಿಧಾನಸಭೆಯ ಚುನಾವಣೆಯಿಂದ ಅತಂತ್ರ ಸ್ಥಿತಿ ಉತ್ಪನ್ನವಾಗಿರುವ ಹಿನ್ನೆಲೆಯಲ್ಲಿ ನಿರಾಶೆಗೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 238.76 ಅಂಕಗಳ ನಷ್ಟದೊಂದಿಗೆ 35,149.12 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 58.40 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,682.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 168.83 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್‌ನ ಇಂದಿನ ದಿನಾಂತ್ಯದ ಮಟ್ಟವು ಕಳೆದ ಮೇ 4ರಂದು ದಾಖಲಾಗಿದ್ದ 34,915.38 ಅಂಕಗಳ ಬಳಿಕದಲ್ಲಿ ದಾಖಲಾಗಿರುವ ನಿಕೃಷ್ಟ ಮಟ್ಟವಾಗಿದೆ. ನಿನ್ನೆ ಬುಧವಾರ ವಿದೇಶಿ ಹೂಡಿಕೆದಾರರು 699.22 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದ್ದರೆ ದೇಶೀಯ ಹೂಡಿಕೆದಾರ ಸಂಸ್ಥೆಗಳು 229.06 ಕೋಟಿ ರೂ ಮೌಲ್ಯದ ಶೇರುಗಳನ್ನು ಖರೀದಿಸಿದ್ದರು.
ಇಂದು ಮುಂಬಯಿ ಶೇರು ಪೇಟೆಯಲ್ಲಿ ಒಟ್ಟು 2,754 ಶೇರುಗಳು ವಹಿವಾಟಿಗೆ ಒಳಪಟ್ಟವು. 1,392 ಶೇರುಗಳು ಮುನ್ನಡೆ ಕಂಡವು; 1,232 ಶೇರುಗಳು ಹಿನ್ನಡೆಗೆ ಗುರಿಯಾದವು; 130 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.