ಮುಂಬಯಿ : ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರ್‌ಬಿಐ ಕೆಲವು ಕ್ರಮಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಸೋಮವಾರ ಮಧ್ಯಾಹ್ನದ ಬಳಿಕ ತೇಜಿಯ ವಾತಾವರಣ ಕಂಡು ಬಂದು ಸೆನ್ಸೆಕ್ಸ್ 299 ಅಂಕಗಳ ಏರಿಕೆಯೊಂದಿಗೆ 36,526.14 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 77.85 ಅಂಕಗಳ ಮುನ್ನಡೆಯನ್ನು ದಾಖಲಿಸಿದ ದಿನದ ವಹಿವಾಟನ್ನು 11,008.30 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಮುಂಬರುವ ಹಬ್ಬದ ಋತುವಿನಲ್ಲಿ ಕಂಡು ಬರಲಿರುವ ಹಣದ ಬೇಡಿಕೆಯನ್ನು ಪೂರೈಸಲು ಅಕ್ಟೋಬರ್‌ನಲ್ಲಿ ತಾನು ಸರಕಾರಿ ಬಾಂಡ್‌ಗಳನ್ನು ಖರೀದಿಸುವ ಮೂಲಕ 36,000 ಕೋಟಿ ರೂ.ಗಳನ್ನು ದೇಶದ ಆರ್ಥಿಕ ವ್ಯವಸ್ಥೆಗೆ ಹರಿಯಬಿಡುವುದಾಗಿ ಆರ್‌ಬಿಐ ಪ್ರಕಟಿಸಿತು. ಶೇರು ಮಾರುಕಟ್ಟೆಗೆ ಈ ಪ್ರಕಟನೆ ಚೇತೋಹಾರಿಯಾಯಿತು.
ಇದರ ಬೆನ್ನಿಗೇ ಸರಕಾರ ಇಂದು ರಾಷ್ಟ್ರೀಯ ನ್ಯಾಯ ಮಂಡಳಿಯನ್ನು ಸಂಪರ್ಕಿಸಿ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿರುವ ಐಎಲ್ ಆ್ಯಂಡ್ ಎಫ್ಎಸ್ ಕಂಪೆನಿಯ ಆಡಳಿತೆಯಲ್ಲಿ ಬದಲಾವಣೆಯನ್ನು ಕೋರಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,855 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,046 ಶೇರುಗಳು ಮುನ್ನಡೆ ಕಂಡವು; 1,620 ಶೇರುಗಳು ಹಿನ್ನಡೆಗೆ ಗುರಿಯಾದವು; 189 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.