ಮುಂಬಯಿ : ಸೆಪ್ಟಂಬರ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡಲು ನಾಳೆ ಗುರುವಾರ ಕೊನೇ ದಿನವಾಗಿದ್ದು ಅದಕ್ಕೆ ಮುನ್ನವೇ ವಹಿವಾಟುದಾರರು ತಮ್ಮ ಶಾರ್ಟ್ ಪೊಸಿಶನ್‌ಗಳನ್ನು ಕವರ್ ಮಾಡಲು ಮುಂದಾದ ಕಾರಣ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 198 ಅಂಕಗಳ ಜಿಗಿತವನ್ನು ದಾಖಲಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 9,900 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ರಿಯಲ್ಟಿ, ತೈಲ ಮತ್ತು ಅನಿಲ ಹಾಗೂ ಬ್ಯಾಂಕಿಂಗ್ ರಂಗದ ಶೇರುಗಳು ಭಾರೀ ಖರೀದಿಯ ಭಾಗ್ಯವನ್ನು ಕಾಣುವ ಮೂಲಕ ಶೇರು ಪೇಟೆ ಉತ್ತಮ ಚೇತರಿಕೆಯನ್ನು ಕಂಡಿತು. ಸೆನ್ಸೆಕ್ಸ್ ಕಳೆದ ಆರು ದಿನಗಳ ನಿರಂತರ ಬೀಳು ಹಾದಿಯಲ್ಲಿ ಸಾಗಿ ಬರುವಲ್ಲಿ 824 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಆರಂಭಿಕ ಚೇತರಿಕೆಯ ಹೊರತಾಗಿಯೂ ಸೆನ್ಸೆಕ್ಸ್ ಇಂದು ಬೆಳಗ್ಗೆ 10.25ರ ಹೊತ್ತಿಗೆ 101.77 ಅಂಕಗಳ ನಷ್ಟಕ್ಕೆ ಗುರಿಯಾಗಿ 31,497.99 ಅಂಕಗಳ ಮಟ್ಟಕ್ಕೆ ಇಳಿಯಿತು; ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.15 ಅಂಕಗಳ ನಷ್ಟಕ್ಕೆ ಗುರಿಯಾಗಿ 9,837.35 ಅಂಕಗಳ ಮಟ್ಟಕ್ಕೆ ಜಾರಿತು.
ಬ್ಯಾಂಕ್ ನಿಫ್ಟಿ 135.45 ಅಂಕಗಳ ನಷ್ಟಕ್ಕೆ ಗುರಿಯಾದರೆ ನಿಫ್ಟಿ ಐಡಿ 18.40 ಅಂಕಗಳ ಹಿನ್ನಡೆಗೆ ಗುರಿಯಾಯಿತು. ನಿಫ್ಟಿ 50 ಗೊಂಚಲಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ 31 ಶೇರುಗಳು ಹಿನ್ನಡೆಗೆ ಗುರಿಯಾದರೆ 20 ಶೇರುಗಳು ಮುನ್ನಡೆಯನ್ನು ಕಂಡವು.
ಇಂದು ರಿಲಯನ್ಸ್, ಎಚ್ ಡಿ ಎಫ್ ಸಿ, ಐಟಿಸಿ, ಸನ್ ಫಾರ್ಮಾ, ಟಾಟಾ ಸ್ಟೀಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಅಂಬುಜಾ ಸಿಮೆಂಟ್ಸ್, ಗೇಲ್, ಎಸಿಸಿ, ಟಿಸಿಎಸ್, ಬಾಶ್ ಶೇರುಗಳು ಮುನ್ನಡೆದರೆ, ಟಾಪ್ ಲೂಸರ್‌ಗಳಾಗಿ ಸನ್ ಫಾರ್ಮಾ, ಅದಾನಿ ಪೋರ್ಟ್, ಎಚ್‌ಯುಎಲ್, ಎಕ್ಸಿಸ್ ಬ್ಯಾಂಕ್, ಡಾ. ರೆಡ್ಡೀಸ್ ಲ್ಯಾಬ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು 10 ಪೈಸೆಯಷ್ಟು ಚೇತರಿಸಿಕೊಂಡು 65.35 ರೂ. ಮಟ್ಟಕ್ಕೆ ಏರುವ ಮೂಲಕ ಶೇರು ಪೇಟೆಗೆ ಕೊಂಚ ಮಟ್ಟಿನ ಉತ್ತೇಜನ ನೀಡಿತು.