ಮುಂಬಯಿ : ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಆರಂಭಗೊಂಡ ಒಂದು ತಾಸಿನ ಅವಧಿಯಲ್ಲಿ ಪ್ರಧಾನ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕತ್ತು ಕತ್ತಿನ ಸ್ಪರ್ಧೆಯೊಂದಿಗೆ ಸಮಬಲ ಹೋರಾಟದ ಲಕ್ಷಣ ಕಂಡು ಬಂದಿದ್ದು ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೂ ಒಲಿದಾಳು ಎಂಬ ಅನ್ನಿಸಿಕೆ ಮೂಡುತ್ತಿರುವಂತೆಯೇ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 867 ಅಂಕಗಳ ಭಾರೀ ಕುಸಿತಕ್ಕೆ ಗುರಿಯಾಯಿತು.
ಮೇಲಾಗಿ ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ 64.72 ಅಂಕಗಳ ಕುಸಿತಕ್ಕೆ ಗುರಿಯಾಗಿ 64.72 ರೂ. ಮಟ್ಟಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಕೂಡ ಮುಂಬಯಿ ಶೇರು ಪೇಟೆಗೆ ದೊಡ್ಡ ಪ್ರಹಾರವಾಗಿ ಪರಿಣಮಿಸಿತು.
ಆದರೆ ಬೆಳಗ್ಗೆ 9.50ರ ಹೊತ್ತಿಗೆ ಮುಂಬಯಿ ಶೇರು ಪೇಟೆ ಬಹುವಾಗಿ ಚೇತರಿಸಿಕೊಂಡು ತನ ಆರಂಭಿಕ ನಷ್ಟವನ್ನು 137.29 ಅಂಕಗಳಿಗೆ ಗಮನಾರ್ಹವಾಗಿ ಇಳಿಸಿಕೊಂಡು 33,325.68 ಮಟ್ಟಕ್ಕೆ ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.90 ಅಂಕಗಳ ನಷ್ಟಕ್ಕೆ ಗುರಿಯಾಗಿ 10,294.40 ಅಂಕಗಳ ಮಟ್ಟವನ್ನು ತಲುಪಿತು.
ಅನಂತರ 10.03 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ ತನ್ನ ಎಲ್ಲ ನಷ್ಟವನ್ನು ನಿವಾರಿಸಿಕೊಂಡದು 47.53 ಅಂಕಗಳ ಏರಿಕೆಯನ್ನು ಪಡೆದುಕೊಂಡು 33,510.50 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18 ಅಂಕಗಳ ಏರಿಕೆಯೊಂದಿಗೆ 10,351.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನಲ್ಲಿಂದು ರಿಲಯನ್ಸ್, ಎಸ್‌ಬಿಐ, ಎಚ್ ಡಿ ಎಫ್ ಸಿ ಬ್ಯಾಂಕ್, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್ ಅತ್ಯಂತ ಕ್ರಿಯಾಶೀಲವಾಗಿದ್ದವು.