ಮುಂಬಯಿ : ಫೀನಿಕ್ಸ್ ನಂತೆ ಮೇಲೆದ್ದು ಬಂದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು ಭರ್ಜರಿ 277 ಅಂಕಗಳ ಏರಿಕೆಯೊಂದಿಗೆ 35,934.72 ಅಂಕಗಳ ಮಟ್ಟಕ್ಕೆ ಜಿಗಿಯುವದರೊಂದಿಗೆ ಐದು ತಿಂಗಳಿಗೂ ಮೀರಿದ ಅವಧಿಯ ಗರಿಷ್ಠ ಎತ್ತರ ತಲುಪಿದ ಸಾಧನೆ ಮಾಡಿತು.
ಡಾಲರ್ ಎದುರು ರೂಪಾಯಿಯ ಚೇತರಿಕೆ, ಜಾಗತಿಕ ಶೇರು ಪೇಟೆಗಳಲ್ಲಿನ ತೇಜಿಯೇ ಮೊದಲಾದ ಕಾರಣಗಳಿಂದ ಉತ್ತಮ ನೆಗೆತ ಕಂಡ ಮುಂಬಯಿ ಶೇರು ಪೇಟೆಯಲ್ಲಿ ಇಂದು ಇಂಧನ, ಕ್ಯಾಪಿಟಲ್ ಗೂಡ್ಸ್, ಪವರ್ , ಬ್ಯಾಂಕಿಂಗ್ ಮೊದಲಾದ ಮುಂಚೂಣಿ ರಂಗಗಳ ಶೇರುಗಳು ಉತ್ತಮ ಖರೀದಿಯನ್ನು ಕಂಡವು.
ಈ ವರ್ಷ ಜನವರಿ 31ರಂದು ಸೆನ್ಸೆಕ್ಸ್ 35,965.02 ಅಂಕಗಳ ಎತ್ತರವನ್ನು ಕಂಡಿತ್ತು. ಅಲ್ಲಿಯ ನಂತರದಲ್ಲಿ ಸೆನ್ಸೆಕ್ಸ್ ಕಂಡಿರುವ ದೊಡ್ಡ ಎತ್ತರ ಇಂದಿನದ್ದಾಗಿದೆ.
ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 80.25 ಅಂಕಗಳ ಜಿಗಿತವನ್ನು ಕಂಡು ದಿನದ ವಹಿವಾಟನ್ನು 10,852.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಟಾಪ್ ಗೇನರ್‌ಗಳು : ವೇದಾಂತ, ಎಸ್ ಬ್ಯಾಂಕ್, ಏಶ್ಯನ್ ಪೇಂಟ್, ಡಾ.ರೆಡ್ಡಿ ಲ್ಯಾಬ್, ಎಕ್ಸಿಸ್ ಬ್ಯಾಂಕ್; ಟಾಪ್ ಲೂಸರ್‌ಗಳು : ಟಿಸಿಎಸ್, ಅಲ್‌ಟ್ರಾ ಟೆಕ್ ಸಿಮೆಂಟ್, ಟೈಟಾನ್ ಕಂಪೆನಿ, ಝೀ ಎಂಟರ್‌ಟೇನ್‌ಮೆಂಟ್, ಹೀರೋ ಮೋಟೋ ಕಾರ್ಪ್.