ಮುಂಬಯಿ : ನಿರಂತರ ಎಂಟು ದಿನಗಳಿಂದ ಗೆಲುವಿನ ಓಟ ನಡೆಸಿಕೊಂಡು ಬಂದಿದ್ದ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರ ಮುಗ್ಗರಿಸಿತು. ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು 222 ಅಂಕಗಳ ನಷ್ಟದೊಂದಿಗೆ 38,164.61 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು.
ಭಾರತದ ಜಿಡಿಪಿ ಅಂದಾಜನ್ನು ಫಿಚ್ ರೇಟಿಂಗ್ ಸಂಸ್ಥೆ ಶೇ.7ರಿಂದ ಶೇ.6.8ಕ್ಕೆ ಕಡಿತ ಗೊಳಿಸಿರುವುದೇ ಮುಂಬಯಿ ಶೇರು ಪೇಟೆಯ ಇಂದಿನ ಸೋಲಿಗೆ ಕಾರಣವಾಗಿದೆ. ಮೇಲಾಗಿ ವಹಿವಾಟುದಾರರು ಈಚಿನ ಲಾಭವನ್ನು ನಗದೀಕರಿಸಲು ದೊಡ್ಡ ಮಟ್ಟದಲ್ಲಿ ಶೇರು ಮಾರಾಟಕ್ಕೆ ಇಳಿದದ್ದು ಕೂಡ ಮುಖ್ಯ ಕಾರಣವಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 64.15 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,456.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್ ಶೇರು ಶೇ.2.47ರ ಕುಸಿತವನ್ನು ಕಂಡು ಟಾಪ್ ಲೂಸರ್ ಎನಿಸಿಕೊಂಡಿತು. ಉಳಿದಂತೆ ರಿಲಯನ್ಸ್ (ಶೇ.2.44), ಮಾರುತಿ (ಶೇ.1.84), ಎಸ್‌ಬಿಐ (ಶೇ.1.76) ಮತ್ತು ಬಜಾಜ್ ಫಿನಾನ್ಸ್ (ಶೇ.1.23) ನಷ್ಟಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,859 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,011 ಶೇರುಗಳು ಮುನ್ನಡೆ ಸಾಧಿಸಿದವು; 1,705 ಶೇರುಗಳು ಹಿನ್ನಡೆಗೆ ಗುರಿಯಾದವು; 143 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.