ಮುಂಬಯಿ : ಲಾಭ ನಗದೀಕರಣ ಹಾಗೂ ವಿಶ್ವ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 133 ಅಂಕಗಳ ನಷ್ಟಕ್ಕೆ ಗುರಿಯಾಗಿ 30,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿದೆ.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 138.71 ಅಂಕಗಳ ನಷ್ಟದೊಂದಿಗೆ 29,987.50 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.35 ಅಂಕಗಳ ನಷ್ಟದೊಂದಿಗೆ 9,319.55 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್ ಶೇರುಗಳು ಮುನ್ನುಗ್ಗಿದವು. ಇದಕ್ಕೆ ಮುಖ್ಯ ಕಾರಣ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಎನ್‌ಪಿಎ (ಅನುತ್ಪಾದಕ ಆಸ್ತಿ) ಮೇಲೆ ಅಂಕುಶ ಹಾಕುವ ಅಧ್ಯಾದೇಶಕ್ಕೆ ಅನುಮೋದನೆ ನೀಡಿದುದೇ ಆಗಿದೆ. ಈ ಅಧ್ಯಾದೇಶವು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಅವಕಾಶ ಕಲ್ಪಿಸುತ್ತದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮೆಟಲ್, ಕ್ಯಾಪಿಟಲ್ ಗೂಡ್ಸ್, ಆಟೋ, ಪವರ್ ಮತ್ತು ರಿಯಲ್ಟಿ ಶೇರುಗಳು ತೀವ್ರ ಮಾರಾಟ ಒತ್ತಕ್ಕೆ ಗುರಿಯಾದವು.
ಬ್ಯಾಂಕಿಂಗ್ ಶೇರುಗಳ ಪೈಕಿ ಎಸ್‌ಬಿಐ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೋಟಕ್ ಬ್ಯಾಂಕ್ ಸರಿ ಸುಮಾರು ಶೇ.3.76ರಷ್ಟು ಏರುವ ಮೂಲಕ ಗಮನ ಸೆಳೆದವು.