ಮುಂಬಯಿ: ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ನಾಳೆ ಬುಧವಾರ ಪ್ರಕಟಿಸಲಿದ್ದು ಅದಕ್ಕೆ ಮುನ್ನ ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 109 ಅಂಕಗಳ ನಷ್ಟದೊಂದಿಗೆ 34,903.21ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 310.49 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 35.35 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,593.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದೇಶದ ಹಣದುಬ್ಬರ ಸ್ಥಿತಿ ಬಹುತೇಕ ದೃಢತೆಯನ್ನು ತೋರಿರುವ ಕಾರಣ ಆರ್‌ಬಿಐ 2014ರ ಜನವರಿಯ ಬಳಿಕ ಇದೇ ಮೊದಲ ಬಾರಿಗೆ ತನ್ನ ಪ್ರಮುಖ ಬಡ್ಡಿ ದರಗಳನ್ನು ಏರಿಸಬಹುದು ಎಂಬ ಅಭಿಪ್ರಾಯ ವಿಶ್ಲೇಷಕರಲ್ಲಿ ಇದೆ. ಹಾಗಾಗಿ ಇಂದಿನ ವಹಿವಾಟಿನಲ್ಲಿ ಆರ್‌ಬಿಐ ಬಡ್ಡಿ ದರ ಸೂಕ್ಷ್ಮತೆ ಹೊಂದಿರುವ ರಿಯಲ್ಟಿ, ಬ್ಯಾಂಕಿಂಗ್ ಮತ್ತು ಆಟೋ ಶೇರುಗಳು ಒತ್ತಡಕ್ಕೆ ಗುರಿಯಾದವು.
ನಿನ್ನೆ ಮಂಗಳವಾರ ದೇಶೀಯ ಹೂಡಿಕೆ ಸಂಸ್ಥೆಗಳು 712.41 ಕೋಟಿ ಶೇರುಗಳನ್ನು ಮಾರಿದ್ದವು; ವ್ಯತಿರಿಕ್ತವಾಗಿ ವಿದೇಶಿ ಹೂಡಿಕೆದಾರರು 2,354.03 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದ್ದವು.