ಮುಂಬಯಿ : 2017-18ರ ಹಣಕಾಸು ವರ್ಷದ ಕೊನೇ ವಹಿವಾಟು ದಿನವಾದ ಇಂದು ಬುಧವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 206 ಅಂಕಗಳ ನಷ್ಟದೊಂದಿಗೆ 32,969 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು. ಹಾಗಿದ್ದರೂ ಈ ಹಣಕಾಸು ವರ್ಷದಲ್ಲಿ ಶೇ.11.30 ಏರಿಕೆಯನ್ನು ಗಳಿಸಿದ ಸಾಧನೆಯನ್ನು ಮುಂಬಯಿ ಶೇರು ಪೇಟೆ ದಾಖಲಿಸಿರುವುದು ಗಮನಾರ್ಹವಾಗಿದೆ.
ನಾಳೆ ಗುರುವಾರ ಮಹಾವೀರ ಜಯಂತಿ ಹಾಗೂ ನಾಡಿದ್ದು ಶುಕ್ರವಾರ ಗುಡ್ ಫ್ರೈಡೆ ಪ್ರಯುಕ್ತ ಶೇರು ಮಾರುಕಟ್ಟೆಗೆ ರಜೆ ಇರುವುದರಿಂದ ಮಾರ್ಚ್ ತಿಂಗಳ ವಾಯಿದೆ ವಹಿವಾಟು ಇಂದೇ ಚುಕ್ತಾ ನಡೆದಿರುವುದು, ದುರ್ಬಲ ಜಾಗತಿಕ ಶೇರು ಪೇಟೆ ಪ್ರವೃತ್ತಿ ತೋರಿ ಬಂದಿರುವುದು ಇತ್ಯಾದಿ ಕಾರಣಗಳು ಶೇರು ಪೇಟೆಯ ಕುಸಿತಕ್ಕೆ ಕಾರಣವಾದವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70 ಅಂಕಗಳ ನಷ್ಟದೊಂದಿಗೆ 10,113.70 ಅಂಕಗಳ ಮಟ್ಟದಲ್ಲಿ ಇಂದಿನ ವಹಿವಾಟನ್ನು ಕೊನೆಗೊಳಿಸಿತು.
2017-18ರ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್ 3,348.18 ಅಂಕಗಳ (ಶೇ.11.30) ಏರಿಕೆಯನ್ನು ಸಂಪಾದಿಸಿದೆ. ಆದರೆ ಇದಕ್ಕೆ ಹಿಂದಿನ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್ ಶೇ.16.88ರ ಏರಿಕೆಯನ್ನು ದಾಖಲಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹಾಲಿ ಹಣಕಾಸು ವರ್ಷವನ್ನು 939.95 ಅಂಕಗಳ (ಶೇ.10.25) ಏರಿಕೆಯೊಂದಿಗೆ ಕೊನೆಗೊಳಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ನಿಫ್ಟಿ 1,435.55 ಅಂಕಗಳ (ಶೇ.18.55) ಏರಿಕೆಯನ್ನು ದಾಖಲಿಸಿತ್ತು. ನಿಫ್ಟಿ ಕಳೆದ ಎರಡು ದಿನಗಳಲ್ಲಿ ಒಟ್ಟು 577.85 ಅಂಕಗಳನ್ನು ಸಂಪಾದಿಸಿತ್ತು.
ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಈ ವಾರ 372.14 ಅಂಕಗಳ (ಶೇ.1.4) ಏರಿಕೆಯನ್ನು ದಾಖಲಿಸಿದೆ. ನಿಫ್ಟಿ 115.65 ಅಂಕಗಳ (ಶೇ.1.16) ಏರಿಕೆಯನ್ನು ದಾಖಲಿಸಿದೆ.