ಮುಂಬಯಿ : ಕರ್ನಾಟಕದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ನೇತ್ಯಾತ್ಮಕ ಜಾಗತಿಕ ಸ್ಥಿತಿಗತಿಯಿಂದ ಕಳೆಗುಂದಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 300 ಅಂಕಗಳ ಭಾರೀ ಕುಸಿತದೊಂದಿಗೆ 34,848.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 86.30 ಅಂಕಗಳ ನಷ್ಟದೊಂದಿಗೆ 10,596.40 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 407.59 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಈ ವಾರದಲ್ಲಿ ಸೆನ್ಸೆಕ್ಸ್‌ಗೆ ಆಗಿರುವ ನಷ್ಟ 687.49 ಅಂಕಗಳು, ಅಂದರೆ ಶೇ.1.93ರ ನಷ್ಟ. ನಿಫ್ಟಿ ಈ ವಾರ ಕಳೆದುಕೊಂಡಿರುವ ಅಂಕಗಳು 210.10 (ಶೇ.1.94 ನಷ್ಟ).
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸದನದಲ್ಲಿ ನಾಳೆ ಶನಿವಾರವೇ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಮತ್ತು ರಾಜ್ಯಪಾಲರು ಈ ಮೊದಲು ನೀಡಿದ್ದ 15 ದಿನಗಳ ಕಾಲಾವಕಾಶವನ್ನು ಗಮನಾರ್ಹವಾಗಿ ಮೊಟಕುಗೊಳಿಸಿರುವುದು ಬಿಜೆಪಿಗೆ ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆಯನ್ನು ಶೇರು ಮಾರುಕಟ್ಟೆ ಮನಗಂಡಿರುವಂತಿದೆ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,758 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಕೇವಲ 763 ಶೇರುಗಳು ಮುನ್ನಡೆ ಕಂಡವು; 1,859 ಶೇರುಗಳು ಹಿನ್ನಡೆಗೆ ಗುರಿಯಾದವು; 136 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.