ಹೊಸದಿಲ್ಲಿ : ಭಾರತ ಮತ್ತು ಚೀನ ಹಾಗೂ ಅಮೆರಿಕ ಮತ್ತು ಉತ್ತರ ಕೊರಿಯ ನಡುವೆ ರಣೋತ್ಸಾಹ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳಲ್ಲಿ ಭರಾಟೆಯ ಮಾರಾಟ ನಡೆದಿದ್ದು ಇದೇ ಸ್ಥಿತಿಯನ್ನು ಎದುರಿಸುತ್ತಿರುವ ಮುಂಬಯಿ ಶೇರು ಮಾರುಕಟ್ಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 336 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿದೆ.
ಬೆಳಗ್ಗೆ 10.45ರ ಹೊತ್ತಿಗೆ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 222.92 ಅಂಕಗಳ ನಷ್ಟದೊಂದಿಗೆ 31,308.41 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 71.60 ಅಂಕಗಳ ನಷ್ಟದೊಂದಿಗೆ 9,748.65 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಹಾಂಕಾಂಗ್‌ನ ಹ್ಯಾಂಗ್ ಸೆಂಗ್ 517.62 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ಜಪಾನಿನ ನಿಕ್ಕಿ 8.97 ಮತ್ತು ಸ್ಟ್ರೇಟ್ ಟೈಮ್ಸ್ 34.40 ಅಂಕಗಳ ನಷ್ಟಕ್ಕೆ ಗುರಿಯಾಗಿವೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟರ್, ರಿಲಯನ್ಸ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ ಬ್ಯಾಂಕ್ ಅತ್ಯಂತ ಕ್ರಿಯಾಶೀಲವಾಗಿದ್ದವು.
ಅರಬಿಂದೋ ಫಾರ್ಮಾ, ಟೆಕ್ ಮಹೀಂದ್ರ, ಲೂಪಿನ್, ಇನ್‌ಫೋಸಿಸ್, ಡಾ. ರೆಡ್ಡಿ ಟಾಪ್ ಗೇನರ್‌ಗಳಾಗಿದ್ದರೆ, ವೇದಾಂತ, ಲಾರ್ಸನ್, ಝೀ ಎಂಟರ್‌ಟೇನ್‌ಮೆಂಟ್, ಹಿಂಡಾಲ್ಕೊ, ಟಾಟಾ ಮೋಟರ್ ಶೇರುಗಳು ಟಾಪ್ ಲೂಸರ್ ಆಗಿದ್ದವು.