ಮುಂಬಯಿ : ಮುಂಬಯಿ ಶೇರು ಪೇಟೆಗೆ ಮತ್ತೆ ಗೂಳಿ ಪ್ರವೇಶ ಆಗಿದೆಯೇನೋ ಎಂಬ ರೀತಿಯಲ್ಲಿ ಇಂದು ಸೋಮವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 194.64 ಅಂಕಗಳ ಜಿಗಿತದೊಂದಿಗೆ ದಿನದ ವಹಿವಾಟನ್ನು 31,882.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 71.25 ಅಂಕಗಳ ಮುನ್ನಡೆಯನ್ನು ದಾಖಲಿಸಿ, 10,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿ, ದಿನದ ವಹಿವಾಟನ್ನು ಅಂತಿಮವಾಗಿ 10,006.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ವಾರದ ಆರಂಭದ ದಿನವಾದ ಇಂದು ಭರ್ಜರಿ ಮುನ್ನಡೆಯನ್ನು ದಾಖಲಿಸಿರುವ ಮುಂಬಯಿ ಶೇರು ಪೇಟೆಯಲ್ಲಿ ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,423 ಶೇರುಗಳು ಮುನ್ನಡೆ ಕಂಡವು; 1,236 ಶೇರುಗಳು ಹಿನ್ನಡೆಗೆ ಗುರಿಯಾದವು; 162 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಎಲ್ ಆ್ಯಂಡ್ ಟಿ, ಟಾಟಾ ಮೋಟರ್ ಡಿವಿಆರ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಟಾಟಾ ಪವರ್ ಇಂದು ಟಾಪ್ ಗೇನರ್ ಪಟ್ಟಿಯಲ್ಲಿ ವಿಜೃಂಭಿಸಿದವು; ಇದೇ ವೇಳೆ ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಏರ್‌ಟೆಲ್,ಇಂಡಿಯಾ ಬುಲ್ಸ್ ಹೌಸಿಂಗ್ ಫಿನಾನ್ಸ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಇಂದು ಬ್ಯಾಂಕ್ ನಿಫ್ಟಿ, ಸೆನ್ಸೆಕ್ಸ್ ಸೂಚ್ಯಂಕವನ್ನು ಹಿಂದಿಕ್ಕಿ 301.50 ಅಂಕಗಳ ಏರಿಕೆಯನ್ನು ದಾಖಲಿಸಿರುವುದು ವಿಶೇಷವೆನಿಸಿತು.