ಮುಂಬಯಿ : 2018ರ ಹೊಸ ವರ್ಷದ ಮೊದಲ ದಿನವಾದ ಇಂದು ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಕುಸಿದು ಬಿದ್ದಿದೆ. ದಿನಾಂತ್ಯಕ್ಕೆ 244 ಅಂಕಗಳ ನಷ್ಟವನ್ನು ಅನುಭವಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಕಳೆದ ಒಂದು ತಿಂಗಳಲ್ಲೇ ಭಾರೀ ದೊಡ್ಡ ಏಕದಿನ ನಷ್ಟವನ್ನು ಅನುಭವಿಸಿತು. ಸೆನ್ಸೆಕ್ಸ್ ದಿನದ ವಹಿವಾಟನ್ನು 33,766.15 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 95.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,423.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಕೊನೇ ತಾಸಿನಲ್ಲಿ ಕಂಡು ಬಂದ ಮಾರಾಟ ಒತ್ತಡ, ಲಾಭ ನಗದೀಕರಣವೇ ಮುಂಬಯಿ ಶೇರು ಕುಸಿತಕ್ಕೆ ಕಾರಣವೆಂದು ತಿಳಿಯಲಾಗಿದೆ.
ಮೇಲಾಗಿ ವಿಶ್ವ ಶೇರು ಮಾರುಕಟ್ಟೆಗಳು ಹೊಸ ವರ್ಷದ ಮೊದಲ ದಿನದ ರಜೆಯಲ್ಲಿ ಇದ್ದುದರಿಂದ ಮುಂಬಯಿ ಶೇರು ಪೇಟೆಗೆ ಇಂದು ಬಾಹ್ಯ ಪ್ರೇರಣೆ ಇಲ್ಲವಾಯಿತು.
ಮುಂಬಯಿ ಶೇರು ಪೇಟೆ ಕಳೆದ ವಾರಾಂತ್ಯ 208.80 ಅಂಕಗಳನ್ನು ಗಳಿಸುವ ಮೂಲಕ ಸಾರ್ವಕಾಲಿಕ ಎತ್ತರವಾಗಿ 34,056.83 ಅಂಕಗಳ ಮಟ್ಟವನ್ನು ತಲುಪಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಸೋಮವಾರ ಒಟ್ಟು 3,050 ಶೇರುಗಳು ವಹಿವಾಟಿಗೆ ಒಳಪಟ್ಟವು; 1,633 ಶೇರುಗಳು ಹಿನ್ನಡೆಗೆ ಗುರಿಯಾದವು; 184 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.