ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರ ಏರಿಸಿರುವ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇತ್ಯಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಭಾರೀ ಉಲ್ಕಾಪಾತ ಸಂಭವಿಸಿದ್ದು ಇದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 1,000 ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,200 ಅಂಕಗಳಿಗಿಂತ ಕೆಳಮಟ್ಟಕ್ಕೆ ಜಾರಿತು.
ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಏರಿಸುವಲ್ಲಿ ಬಾಲಿಶ ಹುಚ್ಚುತನವನ್ನು ತೋರಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಇದನ್ನು ಅನುಸರಿಸಿ ಅಮೆರಿಕದ ಶೇರು ಪೇಟೆ ತರಗೆಲೆಯಂತೆ ಕುಸಿದು ಬಿತ್ತು. ಇದರಿಂದ ತಾನೇನೂ ಚಿಂತಿತನಾಗಿಲ್ಲ ಎಂದು ಟ್ರಂಪ್ ಹೇಳಿದರು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 847.65 ಅಂಕಗಳ ನಷ್ಟದೊಂದಿಗೆ 33,913.24 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 272.00 ಅಂಕಗಳ ನಷ್ಟದೊಂದಿಗೆ 10,188.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬ್ಯಾಂಕಿಂಗ್, ಆಟೋಮೊಬೈಲ್, ಮೆಟಲ್ ಮತ್ತು ಫಾರ್ಮಾಸ್ಯಟಿಕಲ್ ರಂಗದ ಶೇರುಗಳು ಇಂದು ತೀವ್ರ ಪ್ರಹಾರಕ್ಕೆ ಗುರಿಯಾದವು.
ಇದೇ ವೇಳೆ ಡಾಲರ್ ಎದುರು ರೂಪಾಯಿ 24 ಪೈಸೆಗಳ ಪತನ ಕಂಡು ಹೊಸ ಸಾರ್ವಕಾಲಿಕ ದಾಖಲೆಯ 74.45 ರೂ. ಮಟ್ಟಕ್ಕೆ ಕುಸಿಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಜಾಜ್ ಫಿನಾನ್ಸ್, ರಿಲಯನ್ಸ್, ಎಸ್‌ಬಿಐ, ಟಿಸಿಎಸ್, ಎಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಚ್ ಪಿ ಸಿ ಎಲ್, ಝೀ ಎಂಟರ್‌ಟೇನ್‌ಮೆಂಟ್, ಬಿಪಿಸಿಎಲ್, ಗೇಲ್, ಒಎನ್‌ಜಿಸಿ; ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್, ಎಸ್‌ಬಿಐ, ಗ್ರಾಸಿಂ, ಬಜಾಜ್ ಫಿನಾನ್ಸ್ .